ಶಿಕಾರಿಪುರ: ಸೈಕ್ಲೋನ್ ಪರಿಣಾಮದಿಂದ ತಾಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಒಂದೆಡೆ ಬೇಸಿಗೆ ಭತ್ತ, ಮಕ್ಕೆಜೋಳ ಕಟಾವಿಗೆ ತೊಂದರೆಯಾಗಿದೆ. ಮತ್ತೊಂದೆಡೆ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭೂಮಿ ಹಸನು ಮಾಡಿಕೊಳ್ಳಲು ಅನುಕೂಲವಾಗಿದೆ.
ತಾಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಇದರಲ್ಲಿ 6000 ಹೆಕ್ಟೇರ್ ನೀರಾವರಿ ಆಧಾರಿತವಾದರೆ ಉಳಿದ ಭೂಮಿ ಮಳೆಯಾಶ್ರಿತ. ಒಂದು ಕಾಲದಲ್ಲಿ ಭತ್ತದ ಕಣಜವೆಂದೇ ಪ್ರಸಿದ್ಧಿಯಾಗಿದ್ದ ಶಿಕಾರಿಪುರ ತಾಲೂಕಿನಲ್ಲಿ ಈಗ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಉಳಿದ ಭಾಗವನ್ನು ಮೆಕ್ಕೆಜೋಳ ಮತ್ತು ಅಡಕೆ ಆಕ್ರಮಿಸಿಕೊಂಡಿವೆ.
ಈಗಾಗಲೇ ತಾಳಗುಂದ, ಉಡುಗಣಿ, ಹೊಸೂರು ಹೋಬಳಿ ಸೇರಿ ವಿವಿಧೆಡೆ ರೈತರು ಮೆಕ್ಕೆಜೋಳ ಬಿತ್ತನೆಗೆ ಭೂಮಿ ಹಸನು ಮಾಡುತ್ತಿದ್ದಾರೆ. ಹದವಾಗಿ ಒಂದೆರಡು ಮಳೆ ಆಗಿರುವುದರಿಂದ ಕೃಷಿ ಕಾರ್ಯ ಚುರುಕಾಗಿದೆ. ಹಿಂಗಾರಿನಲ್ಲಿ ಮಳೆ ಕಡಿಮೆಯಾದರೂ ಅಥವಾ ಬಾರದಿದ್ದರೂ ಸಲು ತೆನೆಗಟ್ಟಿದಾಗ ತೊಂದರೆ ಆಗಬಾರದೆಂಬ ಮುಂದಾಲೋಚನೆಯಿಂದ ಈ ಬಾರಿ ಬಹುತೇಕ ರೈತರು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಸುಮಾರು 3000 ಕ್ವಿಂಟಾಲ್ ಮೆಕ್ಕೆಜೋಳ ಬಿತ್ತನೆ ಬೀಜಕ್ಕೆ ಬೇಡಿಕೆ ಇತ್ತು. ಆದರೆ 3066 ಕ್ವಿಂಟಾಲ್ ವಿತರಣೆಯಾಗಿದೆ. ಭತ್ತ 2100 ಕ್ವಿಂಟಾಲ್ ಬೇಡಿಕೆ ಇತ್ತು. 2080 ಕ್ವಿಂಟಾಲ್ ವಿತರಣೆಯಾಗಿದೆ. ಈಗಾಗಲೇ ಭೂಮಿ ಹಸನು ಕಾರ್ಯ ಚುರುಕಾಗಿದ್ದು, ಇನ್ನು ಮುಂದೆ ಬೇಡಿಕೆ ಪ್ರಮಾಣ ಜಾಸ್ತಿಯಾಗಲಿದೆ. ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಪೂರೈಸಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. ಈ ನಡುವೆ ಬಿತ್ತನೆ ಬೀಜಗಳ ಬಗ್ಗೆ ರೈತರಿಗೆ ನಕಲಿ ಬೀಜೋತ್ಪಾದನಾ ಕಂಪನಿಗಳಿಂದ ವಾಟ್ಸ್‌ಆ್ಯಪ್ ಮೂಲಕ ಆಮಿಷ ಒಡ್ಡುತ್ತಿರುವುದರಿಂದ ಕೃಷಿ ಇಲಾಖೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದೆ.
ಯೂರಿಯಾ ಅಧಿಕ ಬಳಕೆ: ರೈತರು ಇಲಾಖೆಯ ತಜ್ಞರ ಶಿಾರಸಿನಂತೆ ಎಕರೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸದೆ ಮೂರ್ನಾಲ್ಕು ಪಟ್ಟು ಹೆಚ್ಚು ಬಳಸುವುದರಿಂದ ಸಹಜವಾಗಿ ಯೂರಿಯಾ ಅಭಾವ ಉಂಟಾಗುತ್ತದೆ. ಯೂರಿಯಾಗೆ ಸರಿಸಮನಾದ, ಶಿಾರಸು ಮಾಡಿದ ಇತರೆ ರಸಗೊಬ್ಬರಗಳನ್ನು ಮಾತ್ರ ಬಳಸಬೇಕು. ಅನಗತ್ಯವಾಗಿ ಬಳಸಬೇಡಿ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಮುಂದಿನ ದಿನಗಳಲ್ಲಿ ಅಕಾಲಿಕ ಮಳೆ, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಏನಾದರೂ ಆಗಬಹುದು. ಆದ್ದರಿಂದ ಸ್ವಲ್ಪ ಮುಂಚಿತವಾಗಿಯೇ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಸಲು ಹಾಳಾಗಿತ್ತು. ನಂತರದ ವರ್ಷದಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದವು.