ನ್ಯೂಸ್

ಭೂ ಕಬಳಿಕೆ

ಸುದೀಪ್​ ವಿ.ಎನ್​

ಒಮ್ಮೆ ಸಭೆಯೊಂದರಲ್ಲಿ ಪ್ರವಾದಿವರ್ಯರು(ಸ) ಹೀಗೆ ಹೇಳುತ್ತಾರೆ: ‘ಯಾರಾದರೂ ಒಬ್ಬ ವ್ಯಕ್ತಿ, ಯಾವುದಾದರೂ ಒಂದು ಗೇಣಷ್ಟು ಭೂಮಿ ಯನ್ನೂ ಅಕ್ರಮವಾಗಿ ಕಬಳಿಸಿದರೆ ಕಿಯಾಮತ್​ನಂದು (ಅಂತ್ಯದಿನದಂದು) ಏಳು ಭೂಮಿಗಳ ಉರುಳನ್ನು ಕೊರಳಿಗೆ ಹಾಕಲಾಗುವುದು’. ಮತ್ತೊಂದು ವಚನದಲ್ಲಿ (ಹದೀಸ್) ವರದಿಯಾಗಿರುವಂತೆ, ಯಾರ ಮೇಲಾದರೂ ಅಕ್ರಮವೆಸಗುವುದು ಧರ್ಮಸಮ್ಮತವಲ್ಲ. ಸ್ವತ್ತಿನ ಒಡೆಯ ಸಂತೋಷದಿಂದ ನೀಡಿದರೆ ಪಡೆಯುವುದು ಧರ್ಮಸಮ್ಮತ. ಇಲ್ಲದಿದ್ದರೆ ಅದು ಅಧರ್ಮ ಮಾರ್ಗವಾಗುತ್ತದೆ. ಅಂದಿಗೂ, ಇಂದಿಗೂ ಹೋಲಿಸಿದರೆ ಅಧರ್ಮ ಮಾರ್ಗ, ಧರ್ಮಮಾರ್ಗ ಎರಡೂ ಕಾಲಗಳಲ್ಲಿದ್ದವು. ಮಾನವ ಮಾನವ ತಾನೇ? ಪ್ರವಾದಿ ನುಡಿದಿದ್ದನ್ನು ಅಬೂಹುರೈರಾ(ರ) ಪ್ರಸ್ತಾಪಿಸುತ್ತಾರೆ.

ಒಂದು ಕಾಲ ಬರಲಿದೆ. (ಅದು ಬಂದುಬಿಟ್ಟಿದೆ) ತಾವು ಸಂಪಾದಿಸಿದ ಆಸ್ತಿ ಧರ್ಮ ಸಮ್ಮತವೋ? ಧರ್ಮ ಬಾಹಿರವೋ ಎಂಬ ಚಿಂತೆಯೇ ಅವರಿಗೆ ಬರಲಾರದು. ಅಷ್ಟರಮಟ್ಟಿಗೆ ವಿಕೃತ ಜಗತ್ತೊಂದರ ಕಲ್ಪನೆಯೂ ಬರಲಾರದು. ಪ್ರವಾದಿಯವರ ಪ್ರಕಾರ ಮೂರು ತರಹದ ವ್ಯಕ್ತಿಗಳೊಂದಿಗೆ ಅಲ್ಲಾಹನು ನಿರ್ಣಾಯಕ ದಿನದಂದು ಮಾತನಾಡಲಾರನು. ಅಷ್ಟೇ ಅಲ್ಲ ಅವರತ್ತ ನೋಡಲಾರನು. ಮೊದಲನೇ ವರ್ಗದ ಜನ, ತಮ್ಮ ಸರಕು ಮಾರಾಟ ಮಾಡುವಾಗ ಸುಳ್ಳು ಆಣೆ ಹಾಕಿ, ಹೆಚ್ಚು ಬೆಲೆ ಪಡೆದುಕೊಂಡವರು, ಎರಡನೆಯ ವರ್ಗದ ಜನರು ಅಸರ್ ನಮಾಜ್​ನ (ಸಂಜೆ 5 ಗಂಟೆಯ ನಮಾಜ್) ಬಳಿಕ ಸುಳ್ಳು ಪ್ರಮಾಣ ಮಾಡಿ ಅದರ ಮುಖಾಂತರ ಒಬ್ಬ ಮುಸ್ಲಿಮನ ಸ್ವತ್ತನ್ನು ಕಬಳಿಸಿದವನು.

ಮೂರನೆಯ ವಿಧದ ಜನರು ಹೆಚ್ಚಿನ ನೀರನ್ನು ಇತರ ಜನ ಬಳಸಬಾರದೆಂದು ತೊಂದರೆ ಕೊಡುವವರು. ನಿರ್ಣಾಯಕ ದಿನದಂದು ಅಲ್ಲಾಹನು ಈ ಜನತೆಯೊಂದಿಗೆ, ‘ನನ್ನ ಅನುಗ್ರಹಗಳು ನಿಮಗೆ ದೊರೆಯಲಾರವು. ಏಕೆಂದರೆ ನೀವು ಹೆಚ್ಚಿನ ನೀರನ್ನು ನನ್ನ ದಾಸರಿಗೆ ಸಿಗದಂತೆ ಮಾಡಿದ್ದೀರಿ. ಆ ನೀರನ್ನು ಸೃಷ್ಟಿಸಿದವರು ನೀವು ಆಗಿರಲಿಲ’ ಎನ್ನುವನು. ಆ ಕಾಲದಿಂದ ಈ ಕಾಲದವರೆಗೆ ಸುಳ್ಳು ಆಣೆ ಹಾಕುವುದು ನಡೆದು ಬಂದಿದೆ. ಹಾಗೆ ಆಣೆ ಹಾಕುವುದು ಅಧರ್ಮ ಮಾರ್ಗದಲ್ಲಿ ನಡೆದಂತೆಯೇ ಸರಿ.