ನ್ಯೂಸ್

ವಕ್ಫ್​ ಬೋರ್ಡ್​ಗೆ ರಾತ್ರೋರಾತ್ರಿ ಭೂ ಮಂಜೂರು

ಕೋಲಾರ: ರಾಜ್ಯದಲ್ಲಿ ಮಠ-ಮಂದಿರ, ರೈತರ ಅಸ್ತಿಗಳನ್ನು ರಾತ್ರೋರಾತ್ರಿ ವಕ್ಫ್​ ಬೋರ್ಡ್​ಗೆ ಮಂಜೂರು ಮಾಡಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಜಿಲ್ಲಾಡಳಿತ ಭವನ ಆವರಣದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದ ವಕ್ಫ್​ಬೋರ್ಡ್​ಗೆ ರೈತರ ಜಮೀನು, ದೇವಾಲಯ, ಸ್ಮಶಾನ, ಶಾಲೆಗಳ ಜಾಗಗಳನ್ನು ಮಂಜೂರು ಮಾಡುವುದರಲ್ಲಿ ನಿರತವಾಗಿದ್ದು, ಕೋಲಾರ ಜಿಲ್ಲೆಯಲ್ಲಿಯೂ 600-700 ಎಕರೆ ಮಂಜೂರು ಮಾಡಿರುವುದು ದಾಖಲೆ ಲಭ್ಯವಾಗಿದ್ದು, ಇನ್ನಷ್ಟು ದಾಖಲೆ ಕಲೆ ಹಾಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಹಿಂದೆ ಜಮೀರ್​ ಪಾಷ ಡಿಸಿಯಾಗಿದ್ದ ವೇಳೆಯಿಂದಲೂ ವಕ್ಫ್​ ಬೋರ್ಡ್​ಗೆ ರೈತರ ಜಮೀನು ಸೇರ್ಪಡೆ ಮಾಡುವ ಕೆಲಸಕ್ಕೆ ಮುಂದಾಗಿದ್ದರು. ಕೊನೆಗೆ ರಾಜಕಾರಣಕ್ಕೆ ಬಂದು ಸತ್ತು, ಮಣ್ಣಾದರು. ಇದಾದ ಬಳಿಕ ಜನರ ಆಶೀರ್ವಾದವಿಲ್ಲದೆ ಹಿಂಬಾಗಿಲಿನಿಂದ ಎಂಎಲ್ಸಿಯಾಗಿರುವ ನಸೀರ್​ ಅಹ್ಮದ್​ ಅವರು ಅಕ್ರಂ ಪಾಷರಂತಹ ಡಿಸಿಯನ್ನು ತಂದು ಜಮೀನುಗಳನ್ನು ಹುಡುಕಿಸಿ ವಕ್ಫ್​ಗೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಂವಾದದಲ್ಲಿ ಡಿಸಿ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಂಡಿದ್ದಾರೆ, ಅದು ವಿದಾಯದ ಸಂವಾದವಾಗಿದೆ. ಗಣಪತಿ ವಿಗ್ರಹ, ಹಿಂದೂ ದೇವಾಲಯಗಳ ಮಂಟಪಗಳು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ ಅವುಗಳನ್ನು ವಿರೂಪಗೊಳಿಸಿ ವಕ್ಫ್​ಗೆ ಸೇರ್ಪಡೆ ಮಾಡುತ್ತೀರಾ. ಜಿಲ್ಲೆಯಲ್ಲಿ ಬೇರೆಬೇರೆ ಸಮುದಾಯದವರು ಇಷ್ಟು ಜನಸಂಖ್ಯೆ ಇದ್ದರೂ ಸಮುದಾಯ ಭವನ, ಸ್ಮಶಾನ, ಶಾಲೆಗಳಿಗೆ ಮಾತ್ರ ಜಾಗದ ಕೊರತೆ ಎದ್ದು ಕಾಣೂತ್ತಿದೆ. ಆದರೆ, 218 ಎಕರೆ ಒಂದು ಸಮುದಾಯಕ್ಕೆ ನೀಡಿದ್ದೀರಿ ಎಂದರೆ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಿ ವಕ್ಫ್​ ಅಸ್ತಿ ಹಿಂದೆ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಸ್​.ಬಿ.ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಅಪ್ಪಿ ರಾಜು, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜೇಶ್​ ಸಿಂಗ್​, ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ರಾಮಚಂದ್ರ, ಸಾ.ಮಾ.ಬಾಬು, ವೆಂಕಟೇಶ್​ ಹಾಜರಿದ್ದರು.