ನ್ಯೂಸ್

ಭೂ ಮಂಜೂರಾತಿ ಅಕ್ರಮ ಆರೋಪ: 20ಕ್ಕೆ ಲಿಂಗೇಶ್ ಬೇಲ್ ಅರ್ಜಿ ವಿಚಾರಣೆ

ಬೆಂಗಳೂರು: ಬಗರ್‌ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೇಲೂರು ಮಾಜಿ ಶಾಸಕ ಎಸ್.ಎನ್. ಲಿಂಗೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ 20ಕ್ಕೆ ಮುಂದೂಡಿದೆ.

ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣದಲ್ಲಿ ತಹಸೀಲ್ದಾರ್‌ಗೆ ನೀರಿಕ್ಷಣಾ ಜಾಮೀನು ಸಿಕ್ಕಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ, ‘ಅದು ಹೇಗೆ? ಎಲ್ಲ ಮಾಡಿರುವುದು ತಹಶೀಲ್ದಾರ್. ದಾಖಲೆಗಳ ಸೃಷ್ಟಿ, ದಾಖಲೆಗಳನ್ನು ತಿರುಚಿರುವುದೂ ಅವರೇ. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದು ಹೇಗೆ’ ಎಂದು ಕೇಳಿದ ನ್ಯಾಯಪೀಠ, ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಬಗರ್‌ಹುಕುಂ ಸಾಗುವಳಿ ಭೂ ಮಂಜೂರಾತಿಯಲ್ಲಿ ಅಕ್ರಮ ನಡೆದ ಆರೋಪದಲ್ಲಿ ಮಾಜಿ ಶಾಸಕ ಎಸ್.ಎನ್. ಲಿಂಗೇಶ್ ಹಾಗೂ ಇತರರ ವಿರುದ್ಧ ಹಾಸನ ಜಿಲ್ಲೆ ಬೇಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಲಿಂಗೇಶ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಅದಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.