ಬೆಂಗಳೂರು:ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಭೂಸ್ವಾಧೀನ ಮಾಡಿ ಡೀನೋಟಿಫೈ ಮಾಡುವ ಎ್ಲ ಆದೇಶಗಳು ಮತ್ತು ಅಂತಹ ಅಧಿಸೂಚನೆಗಳನ್ನು ರದ್ದುಗೊಳಿಸುವ ಮುಂದಿನ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸುವ ಕುರಿತು ಶೀಘ್ರವಾಗಿ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸರ್ಕಾರವು ಡೀನೋಟಿಫಿಕೇಷನ್ ಮಾಡಿದ್ದ ಕ್ರಮ ಎತ್ತಿಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಎಸ್. ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಈ ಕುರಿತು ಸರ್ಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂ ಮಾಲೀಕರಾದ ಬಿಡಿಎ ಗಮನಕ್ಕೆ ತಾರದೇ ಡೀನೋಟಿಫಿಕೇಷನ್ ಹಿಂಪಡೆದಿರುವ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಅಲ್ಲದೆ, ಡಿನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳನ್ನು ಕೂಡ ಗೆಜೆಟ್ ಮಾಡಬೇಕು ಮತ್ತು ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ತಲುಪುವಂತೆ ಪ್ರಚಾರ ಮಾಡಬೇಕು. ಇದರಿಂದ ಭೂ ಮಾಲೀಕರು ವಂಚನೆಗೊಳಗಾವುದಕ್ಕೆ ಕಡಿವಾಣ ಹಾಕಬಹುದು. ಜತೆಗೆ ಡೀನೋಟಿಫಿಕೇಷನ್ ರದ್ದುಗೊಳಿಸುವ ಆದೇಶಗಳ ಮರೆ ಮಾಚುವುದಕ್ಕೂ ಅವಕಾಶವಿರುವುದಿಲ್ಲ ಎಂದು ಪೀಠ ತಿಳಿಸಿದೆ.
ಖರೀದಿದಾರರ ಹಿತಾಸಕ್ತಿಗೆ ಪೆಟ್ಟು:
ವ್ಯಕ್ತಿಯು ಡೀನೋಟಿಫೈ ಮಾಡಲಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಖರೀದಿದಾರರ ಹಿತಾಸಕ್ತಿಗೆ ಹಾನಿ ಉಂಟಾಗುತ್ತದೆ. ಬಳಿಕ ಅಂತಹ ಡೀನೋಟಿಫಿಕೇಷನ್ ಅನ್ನು ರದ್ದುಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಡಿಎ ಗಮನಕ್ಕೆ ತಾರದೆ ಡೀನೋಟಿಫಿಕೇಷನ್ ಹೊರಡಿಸಿದ್ದರಿಂದ ಪ್ರಸ್ತುತ ಪ್ರಕರಣದಲ್ಲಿನ ಭೂಮಿಯನ್ನು ಸ್ವಾಧೀನದಿಂದ ಹೊರಗಿಡಬೇಕೇ ಎಂಬುದರ ಕುರಿತಂತೆ ಹೊಸದಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.