ಸಾಗರ ತಾಲೂಕಿನಲ್ಲಿ ಬಾಕಿ ಇರುವ ಭೂಸ್ವಾಧೀನ ಹಕ್ಕು ಪ್ರಕರಣ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಎಸಿ ಆರ್.ಯತೀಶ್‌ಗೆ ಮನವಿ ಸಲ್ಲಿಸಿದರು. ಜಿನೇಶ್, ಸೋಮಶೇಖರ, ಲಕ್ಷ್ಮಣ, ಕುಮಾರ ಗೌಡ ಇತರರಿದ್ದರು.  
ನ್ಯೂಸ್

ಭೂಸ್ವಾಧೀನ ಹಕ್ಕು ಪ್ರಕರಣ ಇತ್ಯರ್ಥಗೊಳಿಸಿ

ಶಿವಕುಮಾರ ಎಸ್.ಪಿ.

ಸಾಗರ: ತಾಲೂಕಿನಲ್ಲಿ ಭೂನ್ಯಾಯ ಮಂಡಳಿ ವ್ಯಾಪ್ತಿಯಲ್ಲಿನ ಭೂಸ್ವಾಧೀನ ಹಕ್ಕು ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಭೂನ್ಯಾಯ ಮಂಡಳಿ ರಚನೆಯಾಗಿ ಆರೇಳು ತಿಂಗಳು ಕಳೆದರೂ ಸರಿಯಾಗಿ ಸಭೆ ಕರೆಯುತ್ತಿಲ್ಲ. ಇದರಿಂದ ಭೂಸುಧಾರಣಾ ಕಾಯ್ದೆಯಡಿ ಇತ್ಯರ್ಥವಾಗುವ ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಪಂಗಳಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಾಗ ಭೂಮಿ ಪಡೆದ ರೈತರ ಜಮೀನಿನ ಅಳತೆ ಕಾರ್ಯ ನಡೆದು ಆಕಾರಬಂದ್ ದುರಸ್ತಿ ಕಾರ್ಯ ನಡೆದಿಲ್ಲ. ಪರಿಷ್ಕೃತ ಹಕ್ಕುಪತ್ರ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ಕಳೆದ ನಾಲ್ಕು ತಿಂಗಳಿನಿಂದ ಭೂನ್ಯಾಯ ಮಂಡಳಿ ಸಭೆ ನಿಗದಿಪಡಿಸಿ, ರೈತರಿಗೆ ನೋಟಿಸ್ ನೀಡಿ ಕೊನೆ ಘಳಿಗೆಯಲ್ಲಿ ರದ್ದುಪಡಿಸಲಾಗುತ್ತಿದೆ. ಸಭೆ ಇದೆ ಎಂದು ರೈತರು ಸಾಗರಕ್ಕೆ ಬರುತ್ತಾರೆ. ಸಭೆ ರದ್ದಾಗಿರುವುದನ್ನು ರೈತರಿಗೆ ತಿಳಿಸುತ್ತಿಲ್ಲ. ರೈತರನ್ನು ಪದೇಪದೆ ಅಲೆದಾಡಿಸಲಾಗುತ್ತಿದೆ. ತಕ್ಷಣ ಭೂನ್ಯಾಯ ಮಂಡಳಿ ಸಭೆ ನಿಗದಿಗೊಳಿಸಬೇಕು. ಸಭೆಯಲ್ಲಿ ರೈತರ ಪ್ರಕರಣ ಇತ್ಯರ್ಥಗೊಳಿಸಿ ಪಹಣಿ ಜತೆ ಪರಿಷ್ಕೃತ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ, ಜಿನೇಶ್, ಸೋಮಶೇಖರ, ವಿಜಯ, ದಾಸನ ಕೃಷ್ಣಮೂರ್ತಿ, ಟಾಕಪ್ಪ, ರಾಜಪ್ಪ, ಸತ್ಯನಾರಾಯಣ, ಲಕ್ಷ್ಮಣ, ಕುಮಾರ ಗೌಡ, ನಾಗರಾಜ್ ಇತರರಿದ್ದರು.