ಮಾಗಡಿ : ಕಣ್ಣೂರು ಮಕ್ಕಳ ದೇವರ ಮಠದ ಆವರಣದ ಜಮೀನಿನಲ್ಲಿ ಶನಿವಾರ ಬೆಳಗ್ಗೆ ವಿಸ್ಮಯ ಕಂಡು ಬಂದಿದೆ. ಜಮೀನಿನಲ್ಲಿ ತೆಂಗಿನ ಗಿಡಗಳಿಗೆ ನೀರಾವರಿ ಪೈಪ್ ಅಳವಡಿಸಲು ಜೆಸಿಬಿ ಮೂಲಕ ಗುಂಡಿ ತೆಗೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಭೂಮಿ ಕುಸಿದಿದೆ. 10 ಅಡಿಗೂ ಹೆಚ್ಚು ಆಳದ ಹಗೇವು ಕಂಡುಬಂದಿದ್ದು, ಇದರಲ್ಲಿ ತಾಮ್ರದಿಂದ ಮಾಡಿದ ಪೂಜಾ ಸಾಮಗ್ರಿಗಳಾದ ಉಯ್ಯಲೆ ಸರಪಳಿ, ಪೂಜಾತಟ್ಟೆ, ದೀಪದ ಸ್ತಂಭ, ವಿಭೂತಿ ಗಡ್ಡೆ, ಜಾಗಟೆ, ನಂದಿಧ್ವಜ, ಗಂಟೆ, ಮಂಗಳಾರತಿ ಉದ್ದಂಡ, ಕಮಂಡಲ ಜತೆಗೆ ಉರಿಯುತ್ತಿರುವ ಎರಡು ದೀಪಗಳು ಜನರಲ್ಲಿ ವಿಸ್ಮಯ ಮೂಡಿಸಿವೆ.
ಮಠದ ಡಾ. ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 1730ರಲ್ಲಿ ಮೈಸೂರು ಮಹಾರಾಜರ ಸಾಮಂತನಾಗಿದ್ದ ಸರ್ವಾಧಿಕಾರಿ ದಳವಾಯಿ ನಂಜರಾಜಯ್ಯ ಅವರ ತಾಯಿ ಮೀನಾಕ್ಷಮ್ಮ ಅವರು ವೀರಶೈವ ಧರ್ಮ ಅಭಿವೃದ್ಧಿಗಾಗಿ ಹೊನ್ನಾಪುರ ಗ್ರಾಮವನ್ನು ಮಕ್ಕಳ ದೇವರ ಮಠಕ್ಕೆ ದಾನ ನೀಡಿ ಬಸವರಾಜ ಪುರವೆಂದು ಹೆಸರಿಟ್ಟು ಈ ಮಠಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಸಿಕ್ಕಿರುವ ಸಾಮಗ್ರಿಗಳಲ್ಲಿ ಅವರ ಹೆಸರಿದೆ, ಈ ಬಗ್ಗೆ ಶಿಲಾಶಾಸನ, ತಾಮ್ರ ಶಾಸನವಿದೆ. ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಭೂಮಿ 10 ಅಡಿ ಕೆಳಗೆ ಕಂಡುಬಂದ ಬೃಹತ್ ಗುಂಡಿಯಲ್ಲಿ ಎರಡು ದೀಪಗಳು ಉರಿಯುತ್ತಿರುವ ಜತೆಗೆ ತಾಮ್ರದ ಪೂಜಾ ಸಾಮಾಗ್ರಿಗಳು ದೊರೆತಿವೆ.
ಮಕ್ಕಳ ದೇವರ ಮಠ ಪುರಾತನ ಮಠವಾಗಿರುವುದು ವಿಶೇಷ. ತುಮಕೂರಿನ ಪ್ರಾಚ್ಯವಸ್ತು ಸಂಶೋಧಕ ನಂಜುಡಸ್ವಾಮಿ, ಪ್ರೊ. ಪರಮಶಿವಮೂರ್ತಿ ಅವರು ಭಾನುವಾರ (ಆ.8) ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.ಸಂಸ್ಕೃತ ವಿದ್ವಾನ್ ಎಂ. ರಾಜಣ್ಣ ಮಾತನಾಡಿ, ಸಂಶೋಧಕರು ಭೇಟಿ ನೀಡಿ ಪರಿಶೀಲಿಸಿದ ನಂತರ ಸಿಕ್ಕಿರುವ ಸಾಮಗ್ರಿಗಳ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂದರು.
ಗ್ರಾಮದ ಹಿರಿಯರಾದ ಕಣ್ಣೂರು ಚಂದ್ರಣ್ಣ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಶಾಸನಗಳಿದ್ದು ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಅಧ್ಯಯನ ಪೀಠ ರಚಿಸಬೇಕು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು. ಆಗ ನಮ್ಮ ಸಂಸ್ಕೃತಿಯ ಉಳಿವಿಗೆ ನಾಂದಿ ಹಾಡಿದಂತಾಗುತ್ತದೆ. 800 ವರ್ಷದ ಹಿಂದಿನ ವಸ್ತುಗಳು ಮಠದ ಜಮೀನಿನಲ್ಲಿ ಪತ್ತೆಯಾಗಿರುವುದು ಸಂತೋಷ ತಂದಿದೆ. ಇವುಗಳ ಉಳಿವಿಗೆ ಶ್ರೀಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.