ಮುಂಬೈ: ಗಣೇಶನ ಹಬ್ಬ ಬಂತೆಂದರೆ ಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲೂ ಎತ್ತರೆತ್ತರದ ಗಣೇಶ ಮೂರ್ತಿಗಳನ್ನು ಕೂರಿಸಿ, ವಾರಗಟ್ಟಲೆ ಇಟ್ಟುಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಈ ಬಾರಿಯ ಗಣೇಶ ಹಬ್ಬದ ಮೇಲೂ ಕರೊನಾ ಕರಿನೆರಳು ಬಿದ್ದಿರುವ ಕಾರಣ, ಮಹಾರಾಷ್ಟ್ರದ ಗಣೇಶ ಪೆಂಡಾಲ್ಗಳ ಮೂರ್ತಿಗಳ ಎತ್ತರ ಗಣನೀಯವಾಗಿ ಕಡಿಮೆಯಾಗುವುದು ನಿಶ್ಚಿತವಾಗಿದೆ.
ಇದಕ್ಕೆ ಪೂರಕ ಎಂಬಂತೆ ಮುಂಬೈನಲ್ಲೇ ಅತಿಎತ್ತರದ ಮೂರ್ತಿ ಎನಿಸಿಕೊಳ್ಳುತ್ತಿದ್ದ ಲಾಲ್ಬಾಗ್ಚಾ ರಾಜಾ ಗಣೇಶ ಮೂರ್ತಿ ಈ ಬಾರಿ ಕೇವಲ 4 ಅಡಿ ಎತ್ತರ ಇರಲಿದೆ.
ಲಾಲ್ಬಾಗ್ನ ಗಣೇಶ ಗಲ್ಲಿಯ ಮುಂಬೈಚಾ ರಾಜಾ ಮಂಡಳದ ಕಾರ್ಯದರ್ಶಿ ಸ್ವಪ್ನಿಲ್ ಪಾರಬ್ ಈ ಬಾರಿಯ ಗಣೇಶ ಹಬ್ಬ ತುಂಬಾ ಸಣ್ಣ ಮಟ್ಟದಲ್ಲಿ ಆಚರಿಸಲ್ಪಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪತಂಜಲಿಯ ಕರೊನಾ ಕಿಟ್ನ ದರ 545 ರೂಪಾಯಿ
ಲಾಲ್ಬಾಗ್ಚಾ ಮಂಡಳ ಇಡೀ ಮುಂಬೈನಲ್ಲೇ ತುಂಬಾ ಪ್ರಸಿದ್ಧವಾದದ್ದು. ಬಾಲಿವುಡ್ ತಾರೆಯರು, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತಿತರ ಪ್ರತಿಷ್ಠಿತರು ಈ ಪೆಂಡಾಲ್ಗೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ರಾಜ್ಯದಲ್ಲಿ ಕರೊನಾ ಪಿಡುಗು ಜೋರಾಗಿರುವ ಕಾರಣ ಈ ಬಾರಿ ಕಡಿಮೆ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಎಲ್ಲ ಪೆಂಡಾಲ್ಗಳಿಗೆ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಪೆಂಡಾಲ್ನವರೂ ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಮೂರ್ತಿ ವಿಸರ್ಜನೆಗಾಗಿ ಮುಂಬೈನ ಸಮುದ್ರ ತೀರದವರೆಗೆ ಬೃಹತ್ ಮೆರವಣಿಗೆ ನಡೆಸುವುದು ಸಾಮಾನ್ಯ. ಆದರೆ, ಈ ಬಾರಿ ಕೋವಿಡ್ ಪಿಡುಗು ಹಿನ್ನೆಲೆಯಲ್ಲಿ ಬಿಎಂಸಿ ವತಿಯಿಂದ ಕೃತಕ ಕೊಳಗಳನ್ನು ನಿರ್ಮಿಸಿ, ಅವುಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪೆಂಡಾಲ್ಗಳ ಗಣೇಶ ಮೂರ್ತಿಯ ಎತ್ತರ ಕಡಿಮೆಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.