ಬೆಂಗಳೂರು: ವಿಧಾನ ಪರಿಷತ್ನ ತೆರವಾದ ಒಂದು ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಶನಿವಾರ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.
ಫೆ.17ರಂದು ನಡೆಯಲಿರುವ ಉಪ ಚುನಾವಣೆಗೆ ಲಕ್ಷ್ಮಣ ಸವದಿ ಅವರ ಏಕೈಕ ಹೆಸರು ರಾಜ್ಯ ಸಮಿತಿ ಶಿಫಾರಸು ಮಾಡಿದ್ದು, ಕೇಂದ್ರೀಯ ಚುನಾವಣೆ ಸಮಿತಿ ಒಪ್ಪಿಕೊಂಡಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ತೆರವಾದ ಈ ಸ್ಥಾನಕ್ಕೆ ಬಾಕಿ ಉಳಿದ 2022ರ ಜೂನ್ 14ರವರೆಗಿನ ಅವಧಿಗೆ ಉಪ ಚುನಾವಣೆ ನಡೆಯಲಿದೆ.
ಚರ್ಚೆಗೆ ತೆರೆ: ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ಮೂರು ದಿನಗಳಲ್ಲೇ ಸವದಿ ಅಧಿಕೃತ ಅಭ್ಯರ್ಥಿ ಎಂದು ಪಕ್ಷ ಪ್ರಕಟಿಸುವ ಮೂಲಕ ಈ ಕುರಿತ ಚರ್ಚೆಗೆ ತೆರೆ ಎಳೆದಿದೆ. ಮೇಲ್ಮನೆಯ ಪಕ್ಷಗಳ ಬಲಾಬಲದ ಲೆಕ್ಕಾಚಾರದಂತೆ ಸವದಿ ಆಯ್ಕೆ ಸರಳವಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ತಿಳಿಸಿದೆ. ಆದರೆ, ಜೆಡಿಎಸ್ ನಿಲುವು ಈವರೆಗೆ ಗೊತ್ತಾಗಿಲ್ಲ. ಸವದಿ ಅವಿರೋಧ ಆಯ್ಕೆ ಬಹುತೇಕ ಖಚಿತವಾದಂತಿದೆ.
ಶಂಕರ್ಗೆ ನಿರಾಸೆ
ಫೆ.17ರಂದು ಚುನಾವಣೆ, ಅಂದೇ ಮತ ಎಣಿಕೆ, ಫಲಿತಾಂಶ ಪ್ರಕಟ ಆಗಲಿರುವ ಕಾರಣ ಸವದಿ ಡಿಸಿಎಂ ಪಟ್ಟ ಭದ್ರವಾಗಲಿದೆ. ಎರಡೂ ಮನೆಯ ಸದಸ್ಯರಲ್ಲದ ಸವದಿ ಡಿಸಿಎಂ ಆಗಿದ್ದು, ಆರು ತಿಂಗಳೊಳಗೆ (ಫೆ.20) ಯಾವುದಾದರೊಂದು ಮನೆಯ ಸದಸ್ಯರಾಗಬೇಕಿತ್ತು. ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಆರ್.ಶಂಕರ್ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜೂನ್ನಲ್ಲಿ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಆಯ್ಕೆಯಾದರೆ ಪೂರ್ಣಾವಧಿಯದಾಗಿದ್ದು, ಕೂಡಲೇ ಮಂತ್ರಿ ಮಾಡುವೆ ಎಂದು ಶಂಕರ್ಗೆ ಸಿಎಂ ಭರವಸೆ ನೀಡಿ ಒಪ್ಪಿಸಿದ್ದಾರೆ ಎನ್ನಲಾಗಿದೆ.