ಶಿವಮೊಗ್ಗ: ಅಡಕೆ ಮಾರುಕಟ್ಟೆಯಲ್ಲಿ ಮತ್ತೆ ಹಾವು-ಏಣಿಯಾಟ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಲಕ್ಷ ರೂ. ಸನಿಹಕ್ಕೆ ಬಂದು ಮತ್ತೆ ಕುಸಿತ ಕಂಡಿದ್ದ ಸರಕು ಅಡಕೆ ಮಂಗಳವಾರ ಶಿವಮೊಗ್ಗ ಎಪಿಎಂಸಿಯಲ್ಲಿ ಕ್ವಿಂಟಾಲ್‌ಗೆ 99,696 ರೂ.ಗೆ ಏರಿಕೆಯಾಗಿದೆ. ಸೋಮವಾರ ಕ್ವಿಂಟಾಲ್‌ಗೆ 82,996 ರೂ. ಇದ್ದ ಸರಕು ಏಕಾಏಕಿ ಲಕ್ಷದ ಸಮೀಪ ಹೋಗಿದೆ.
99,696 ರೂ.ಗೆ ಮಂಗಳವಾರ ಕೇವಲ ಒಂದು ಕ್ವಿಂಟಾಲ್ ಅಡಕೆಯನ್ನು ವ್ಯಾಪಾರಿಗಳು ಖರೀದಿ ಮಾಡಿದ್ದಾರೆ. ಹೀಗಾಗಿ ಇದೊಂದು ಅಚ್ಚರಿ ಧಾರಣೆ ಎಂದೇ ಹೇಳಲಾಗುತ್ತಿದೆ. ಈಗ ಎಷ್ಟು ದಿನ ಇದೇ ಬೆಲೆ ಸರಕು ಅಡಕೆಗೆ ಇರುತ್ತದೆ? ಕ್ವಿಂಟಾಲ್ ಅಡಕೆ ಲಕ್ಷ ರೂ. ತಲುಪುವುದೇ? ಎಂಬ ಕುತೂಹಲ ಮಾರುಕಟ್ಟೆ ಹಾಗೂ ಬೆಳೆಗಾರರ ವಲಯದಲ್ಲಿ ಮನೆಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಅಡಕೆ ಸಂಸ್ಕರಣೆಯಲ್ಲಿ ಯಾಂತ್ರೀಕರಣ ಹೆಚ್ಚಿದ ಬಳಿಕ ಸರಕು ಅಡಕೆ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಮಲೆನಾಡು ಭಾಗದ ಸರಕು ಅಡಕೆಗೆ ವ್ಯಾಪಕ ಬೇಡಿಕೆಯಿದೆ. ಹೀಗಾಗಿ ಕಳೆದ ಕೆಲವು ವರ್ಷಗಳಲ್ಲಿ ಎಂದೂ ಸರಕು ತನ್ನ ಶ್ರೇಷ್ಠತೆಯನ್ನು ಬಿಟ್ಟುಕೊಟ್ಟಿಲ್ಲ. ನಿರಂತರವಾಗಿ ಉತ್ತಮ ಧಾರಣೆ ಕಾಯ್ದುಕೊಂಡು ಬಂದಿದೆ. ದಶಕದ ಬಳಿಕ ಮತ್ತೆ ಲಕ್ಷ ರೂ.ಗೆ ಬಂದು ತಲುಪಿರುವುದು ವಿಶೇಷ.