ನ್ಯೂಸ್

Lakhimpur Kheri Case: 3 ದಿನ ಪೊಲೀಸ್​ ಕಸ್ಟಡಿಗೆ ಸಚಿವಪುತ್ರ ಆಶಿಶ್​ ಮಿಶ್ರ

ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ಅವರನ್ನು ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಅಕ್ಟೋಬರ್ 3 ರಂದು ನಡೆದ ಘಟನೆಯಲ್ಲಿ ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನ ಸಾವಪ್ಪಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರ ಅವರನ್ನು ಶನಿವಾರದಂದು ಜಿಲ್ಲಾ ಪೊಲೀಸ್​ ಠಾಣೆಗೆ ವಿಚಾರಣೆಗೆ ಕರೆಸಲಾಗಿತ್ತು. ಸುಮಾರು 12 ಗಂಟೆಗಳ ಕಾಲದ ಪ್ರಶ್ನೋತ್ತರಗಳ ನಂತರ ಹಲವು ಪ್ರಶ್ನೆಗಳಿಗೆ ಮಿಶ್ರ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇಂದು ಅವರನ್ನು ಲಖೀಂಪುರ ಖೇರಿಯ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಸರ್ಕಾರಿ ವಕೀಲರು 14 ದಿನಗಳ ಪೊಲೀಸ್​ ರಿಮ್ಯಾಂಡ್​ನ ಮನವಿ ಮಾಡಿದರು. ಆದರೆ, ಮಿಶ್ರ ಪರ ವಕೀಲರ ವಿರೋಧದ ಹಿನ್ನೆಲೆಯಲ್ಲಿ, ನ್ಯಾಯಾಲಯವು, 3 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿತು ಎನ್ನಲಾಗಿದೆ. ಅಕ್ಟೋಬರ್​ 12 ರಿಂದ 14 ರವರೆಗೆ ಪೊಲೀಸ್​ ಕಸ್ಟಡಿಯಲ್ಲಿ ಆರೋಪಿ ಮಿಶ್ರರ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ. (ಏಜೆನ್ಸೀಸ್)