ನ್ಯೂಸ್

ನಯನತಾರಾ ಸರ್ಜರಿ ಮಾಡಿಸಿದ್ದಾರೆ; ವದಂತಿ ಕುರಿತು ಲೇಡಿ ಸೂಪರ್​​ಸ್ಟಾರ್​​ ಹೇಳಿದ್ದು ಹೀಗೆ.. | Nayanthara

ಚೆನ್ನೈ: ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್​ಸ್ಟಾರ್​ ಯಾರೆಂದರೆ ನಯನತಾರಾ(Nayanthara) ಎಂದು ಹೇಳುವ ಅವಶ್ಯಕತೆ ಇಲ್ಲ. ಅಂತಹ ಸೌಂದರ್ಯ ಮತ್ತು ನಟನೆಯಿಂದ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ನಟಿ. ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಇತ್ತೀಚೆಗೆ ಬಾಲಿವುಡ್​​ಗೆ ಎಂಟ್ರಿ ಕೊಟ್ಟು ಅಲ್ಲಿಯೂ ಕಮಾಲ್​​ ಮಾಡಿರುವ ನಟಿ ನಯನತಾರಾ ಸಿನಿಮಾ ಜಗತ್ತಿಗೆ ಕಾಲಿಟ್ಟು ದಶಕಗಳೇ ಕಳೆದರೂ ಈಗಲೂ ಅದೇ ಸೌಂದರ್ಯವನ್ನು ಉಳಿಸಿಕೊಂಡು ಸತತ ಆಫರ್‌ಗಳನ್ನು ಪಡೆಯುತ್ತಿದ್ದಾರೆ.

ಎಷ್ಟೇ ವಿವಾದಗಳಲ್ಲಿ ಸಿಲುಕಿದರೂ ಕುಗ್ಗದೆ ನಯನತಾರಾ ತಮ್ಮ ಸಿನಿಮಾಗಳ ಮೂಲಕ ಸವಾಲ್​ ನೀಡುವಂತೆ ಮುಂದುವರಿಯುತ್ತಾರೆ. ಅಂದ್ಹಾಗೆ ನಯನತಾರಾ ಅವರು ವೃತ್ತಿಜೀವನವು ಮೊದಲು ಕೇರಳದ ಟಿವಿ ಚಾನೆಲ್‌ನಲ್ಲಿ ಸಣ್ಣ ಕಾರ್ಯಕ್ರಮ ನಿರೂಪಕರಾಗಿ ಪ್ರಾರಂಭವಾಯಿತು ಎನ್ನಲಾಗಿದೆ. ಅದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಿರೂಪಕರಾಗಿ ಕೆಲಸ ಮಾಡಿರುವ ಕ್ಲಿಪ್​​​ ವೈರಲ್​ ಆಗುತ್ತಿದೆ.

ಆ ಕ್ಲಿಪ್​​ನಲ್ಲಿನ ನಯನತಾರಾ ಅವರನ್ನು ನೋಡಿ ಇಂದಿನ ಲೇಡಿ ಸೂಪರ್​ಸ್ಟಾರ್​ ನಯನತಾರಾ ಅವರನ್ನು ಕಂಡ ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ. ನಟಿಯರು ಸಿನಿಮಾ ಮಾಡುವುದು ಹೆಚ್ಚಾದಂತೆ ಅವರ ಲುಕ್​ ಕೂಡ ಬದಲಾಗುತ್ತಿರುತ್ತದೆ. ಅಭಿಮಾನಿಗಳು ನಟಿಮಣಿಯರ ಈ ಬದಲಾವಣೆಗೆ ಸರ್ಜರಿಯೇ ಕಾರಣ ಎಂದು ಹೇಳುತ್ತಾರೆ. ಹಾಗೆಯೇ ನಯನತಾರಾ ಕೂಡ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬು ಗುಮಾನಿ ಹರಿದಾಡುತಿತ್ತು. ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾ ಖುದ್ದು ಸ್ಪಷ್ಟನೆ ನೀಡಿದ್ದಾರೆ.

ನನ್ನ ಮುಖದಲ್ಲಿನ ಬದಲಾವಣೆ ಕಂಡು ಎಷ್ಟೋ ಮಂದಿ ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದುಕೊಂಡಿದ್ದಾರೆ. ಆನ್​​​ ದಿ ರೆಕಾರ್ಡ್​​​ ಹೇಳುತ್ತಿದ್ದೇನೆ ಅದು ನಿಜವಲ್ಲ ಎಂದು ಹೇಳಿದ್ದಾರೆ. ನನ್ನ ಮೊದಲು ಕಾಣುತ್ತಿದ್ದಕ್ಕೂ ಈಗ ಕಾಣುತ್ತಿರುವುದಕ್ಕೂ ಬದಲಾವಣೆ ಇದೆ ನಿಜ. ಆದರೆ ಇದು ಸರ್ಜರಿಯಿಂದ ಬದಲಾಗಿಲ್ಲ. ನನ್ನ ಈಗಿನ ಬದಲಾಗಿರುವ ಲುಕ್​ಗೆ ನಾನು ಫಾಲೋ ಮಾಡುತ್ತಿರುವ ಡಯಟ್​​ ಕಾರಣವಾಗಿದೆ. ನನ್ನ ತೂಕದಲ್ಲಿನ ಏರಿಳಿತದಿಂದಾಗಿ ಮುಖದಲ್ಲಿ ಬದಲಾವಣೆ ಉಂಟಾಗಿದೆ. ಬೇಕಿದ್ದರೆ ನೀವು ನನ್ನ ಕೆನ್ನೆಯನ್ನು ಪಿಂಚ್​ ಮಾಡಿ ನೋಡಿ, ಇಲ್ಲವಾದರೆ ಬರ್ನ್​ ಮಾಡಿ. ಅಲ್ಲಿ ನಿಮಗೆ ಪ್ಲಾಸ್ಟಿಕ್​ ಸಿಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಯನತಾರಾ ಕೊನೆಯದಾಗಿ ಅನ್ನಪೂರ್ಣಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ಬಳಿ ಸಾಲು ಸಾಲು ಸಿನಿಮಾಗಳಿದ್ದು ಮೂಕುತಿ ಅಮ್ಮನ್​​ 2, ಥಾನಿ ಒರುವನ್​ ಸಿನಿಮಾಗಳು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿವೆ. (ಏಜೆನ್ಸೀಸ್​​)