ನವದೆಹಲಿ: ಲಡಾಖ್ ಬಳಿಯ ವಾಸ್ತವ ಗಡಿರೇಖೆಗೆ (ಎಲ್ಎಸಿ) ಚೀನಾ ಬಹುದೊಡ್ಡ ಸೇನಾಪಡೆಯನ್ನು ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾತುಕತೆ ಮೂಲಕ ಪ್ರಸಕ್ತ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲಾಗುವುದು. ಈಗಾಗಲೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ಜಾರಿಯಲ್ಲಿವೆ. ಉಭಯ ರಾಷ್ಟ್ರಗಳ ಮಿಲಿಟರಿ ಪಡೆಗಳ ಅಧಿಕಾರಿಗಳು ಜೂ.6ರಂದು ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ಎಲ್ಎಸಿ ಬಳಿ ಚೀನಾದ ಯೋಧರ ಜಮಾವಣೆಗೆ ನಿರ್ದಿಷ್ಟ ಕಾರಣವನ್ನು ಆರೋಪಿಸಲು ನಿರಾಕರಿಸಿದ ಅವರು, ಮಾತುಕತೆಗಳು ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಈ ಬಗ್ಗೆ ಶಂಕೆ ವ್ಯಕ್ತಪಡಿಸಿ, ವದಂತಿಗಳನ್ನು ಹಬ್ಬಿಸುವುದು, ಇಲ್ಲದ ಕಾರಣಗಳನ್ನು ಆರೋಪಿಸುವುದು ತಪ್ಪಾಗುತ್ತದೆ ಎಂದು ತಿಳಿಸಿದರು.
ಚೀನಾ ಜಮಾವಣೆ ಮಾಡಿರುವ ಪ್ರಮಾಣದ ಯೋಧರನ್ನು ಭಾರತ ಕೂಡ ಎಲ್ಎಸಿ ಬಳಿಗೆ ರವಾನಿಸಿದೆ. ಭಾರತದ ಆತ್ಮಾಭಿಮಾನಕ್ಕೆ ಯಾರೊಬ್ಬರೂ ಧಕ್ಕೆಯನ್ನುಂಟು ಮಾಡದಂತೆ ಎಚ್ಚರವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಚೀನಿ ಯೋಧರು ಭಾರತೀಯ ಪ್ರದೇಶಗಳಿಗೆ ಅತಿಕ್ರಮಣ ಮಾಡಿರುವ ವಿಷಯವಾಗಿ ರಾಜನಾಥ್ ಸಿಂಗ್ ಏನೊಂದು ಹೇಳದಿದ್ದರೂ, ಗಲ್ವಾನ್ ಮತ್ತು ಪ್ಯಾಂಗಾಂಗ್ ತ್ಸೊ ಸರೋವರದ ಬಳಿ ಭಾರತಕ್ಕೆ ಸೇರಿದ ಪ್ರದೇಶಗಳನ್ನು ಅತಿಕ್ರಮಿಸಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ.
ಚೀನಾ ನೆರೆ ರಾಷ್ಟ್ರವಷ್ಟೇ: ಚೀನಾವನ್ನು ಶತ್ರು ರಾಷ್ಟ್ರ ಎಂದು ಸಂಬೋಧಿಸುವುದನ್ನು ವಿರೋಧಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾ ಒಂದು ನೆರೆರಾಷ್ಟ್ರವಷ್ಟೇ. ಪಾಕಿಸ್ತಾನ ಕೂಡ ನೆರೆರಾಷ್ಟ್ರವಷ್ಟೇ. ಆದರೆ, ಯಾರೇ ಆದರೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡಲು ಪ್ರಯತ್ನಿಸಿದರೆ, ಸೂಕ್ತ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಹೇಳಿದರು.