ನ್ಯೂಸ್

ಲಡಾಖ್‌ ಸಂಘರ್ಷ: ಭಾರತಕ್ಕೆ ಜಪಾನ್‌ ಬೆಂಬಲ- ಚೀನಾಕ್ಕೆ ಛೀಮಾರಿ

ಟೋಕಿಯೋ: ಲಡಾಖ್‌ ಗಡಿಯಲ್ಲಿ ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾಕ್ಕೀಗ ಎಲ್ಲೆಡೆಯಿಂದಲೂ ಮುಖಭಂಗವಾಗುತ್ತಿದೆ.

ಇದೀಗ ಭಾರತಕ್ಕೆ ಗರಿಷ್ಠ ಬೆಂಬಲ ಸೂಚಿಸಿರುವ ಜಪಾನ್ ಈ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ "ಏಕಪಕ್ಷೀಯ" ಪ್ರಯತ್ನವನ್ನು ತಾನು ಪ್ರಬಲವಾಗಿ ವಿರೋಧಿಸುತ್ತೇನೆ ಎಂದಿದೆ. ಇಂಥ ಕೃತ್ಯ ಯಾವುದೇ ರಾಷ್ಟ್ರದಿಂದ ಸರಿಯಲ್ಲ ಎನ್ನುವ‌ ಮೂಲಕ ಚೀನಾಕ್ಕೆ ಜಪಾನ್‌ ಪರೋಕ್ಷವಾಗಿ ಛೀಮಾರಿ ಹಾಕಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀರಂಗ ಅವರೊಂದಿಗೆ ನಡೆದ ಮಾತುಕತೆಯ ನಂತರ ಜಪಾನ್ ರಾಯಭಾರಿ ಸತೋಶಿ ಸುಜುಕಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮಾತುಕತೆಯ ಮೂಲಕ ವಿವಾದವು ಶಾಂತಿಯುತವಾಗಿ ಬಗೆಹರಿದರೆ ಒಳ್ಳೆಯದು ಎಂದಿರುವ ಅವರು, ಚೀನಾದ ಈ ಕ್ರಮ ಖಂಡನಾರ್ಹ ಎಂದಿದ್ದಾರೆ.

"ವಿದೇಶಾಂಗ ಕಾರ್ಯದರ್ಶಿಗಳೊಂದಿಗಿನ ಉನ್ನತ ಮಟ್ಟದ ಫಲಪ್ರದ ಮಾತುಕತೆ ಬಳಿಕ ಭಾರತ ಸರ್ಕಾರ ಎಲ್ ಎಸಿ ಸಂಘರ್ಷದ ನಂತರ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅಲ್ಲದೆ ಎರಡೂ ರಾಷ್ಟ್ರಗಳ ನಡುವೆ ಮಾತುಕತೆಯ ಮೂಲಕ ವಿವಾದವು ಕೊನೆಗಾಣಲಿದೆ ಎಂದು ನಮ್ಮ ರಾಷ್ಟ್ರ ಆಶಿಸುತ್ತದೆ" ಎಂದು ಜಪಾನ್ ರಾಯಭಾರಿ ಟ್ವೀಟ್ ಮಾಡಿದ್ದಾರೆ.

ಸದ್ಯ ಈ ಪ್ರದೇಶದಲ್ಲಿ ಶಾಂತಿ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಪೂರ್ವ ಲಡಾಖ್‌ನ ಎಲ್ಲಾ ಪ್ರದೇಶಗಳಲ್ಲಿ ಯಥಾಸ್ಥಿತಿ ಪುನಃಸ್ಥಾಪಿಸಲು ಭಾರತ ಒತ್ತಾಯಿಸುತ್ತಿದೆ.