ಶಿವಮೊಗ್ಗ: ಇಂದು ಪದವೀಧರರಲ್ಲಿ ಕೌಶಲದ ಕೊರತೆ ಇದೆ. ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೌಶಲ ಅಗತ್ಯ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ. ವಿಎಲ್ಎಸ್ ಕುಮಾರ್ ಹೇಳಿದರು.
ಎನ್ಇಎಸ್ ಇನ್ಸ್ಟಿಟ್ಯೂಟ್ ಆ್ ಅಡ್ವಾನ್ಸಡ್ ಸ್ಟಡಿಸ್ನಿಂದ ಸೋಮವಾರ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಬದಲಾವಣೆಗಳ ಬಗ್ಗೆ ಎಚ್ಚರಿಕೆ ಅವಶ್ಯ ಎಂದರು.
ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು ಯುವ ಸಮೂಹವನ್ನು ಜ್ಞಾನದಿಂದ ಹಿಂದಕ್ಕೆ ಕೊಂಡೊಯ್ಯುತ್ತಿವೆ. ಸಮಯದ ನಿರ್ವಹಣೆ, ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿಯಿಂದ ಉತ್ತಮ ಗುರಿಯೆಡೆಗೆ ಸಾಗುವುದು ಸಾಧ್ಯ. ಕಾಲೇಜು ದಿನಗಳಲ್ಲಿ ಕೆಟ್ಟ ಅಭ್ಯಾಸಗಳು ಆರಂಭವಾಗುವ ಎಲ್ಲ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಕೆ.ನಾಗರಾಜ್, ಪ್ರತಿ ದಿನವೂ ವಿದ್ಯಾರ್ಥಿಗಳಿಂದ ಹೊಸತನ್ನು ಕಲಿಯುವ ಅವಕಾಶ ಉಪನ್ಯಾಸಕರಿಗಿದೆ ಎಂದು ಅಭಿಪ್ರಾಯಪಟ್ಟರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಚಾರ್ಯ ಡಾ.ಬಿ.ಎಸ್.ಶಿವಪ್ರಸಾಸ್ ಇದ್ದರು.