ನ್ಯೂಸ್

ಅಂತಾರಾಜ್ಯ ಜಲ ವಿವಾದ ಬಗೆಹರಿಸಲು ದೂರದೃಷ್ಟಿ, ಪ್ರಾಮಾಣಿಕತೆ ಕೊರತೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು ನದಿ ನೀರಿನ ವಿವಾದಗಳನ್ನು ಬಗೆಹರಿಸುವ ವಿಚಾರದಲ್ಲಿ ದೇಶದಲ್ಲಿ ನೀರು ಮತ್ತು ಹಣದ ಕೊರತೆಯಿಲ್ಲ. ಆದರೆ ದೂರದೃಷ್ಟಿ, ಪ್ರಾಮಾಣಿಕತೆಯ ಕೊರತೆಯಿದೆ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಡಾ. ಎಂ. ಎಸ್. ರಾಮಯ್ಯ ಅವರ ಆಂಗ್ಲಭಾಷಾ ಆತ್ಮಕತೆ ’ರಾಮೈಯಾನಂ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ಗೋದಾವರಿ ನದಿಯಿಂದ 1,300 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವುದು ನನ್ನ ಅರಿವಿಗೆ ಬಂತು. ಈ ನೀರನ್ನು ಬಳಸುವ ಚಿಂತನೆ ನಡೆಸಿದೆ. ಇದಕ್ಕಾಗಿ ಪೊಲವರಂ ಯೋಜನೆ ಜಾರಿಗೊಳಿಸಲಾಯಿತು. ಗೋದಾವರಿಯಿಂದ, ಕೃಷ್ಣಾ, ಪೆನ್ನಾರ್‌ಗೆ ನೀರು ಹರಿಸಿ ಅಂತಿಮವಾಗಿ ಕಾವೇರಿಗೆ ನೀರು ಹರಿಸುವ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವನಾಗಿ 23 ಅಂತಾರಾಜ್ಯ ಜಲ ಸಮಸ್ಯೆಗಳಲ್ಲಿ 18 ಸಮಸ್ಯೆಗಳನ್ನು ಪರಿಹರಿಸಿದ್ದೆ. ಆದರೆ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಇರುವ ಕಾವೇರಿ ವಿವಾದ ಪರಿಹರಿಸಲು ಸಾಧ್ಯವಾಗಲಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ವೇಳೆ ಜಲ ವಿವಾದಗಳಲ್ಲಿ ಭಾಗಿಯಾಗಿದ್ದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಸಮಸ್ಯೆ ಪರಿಹರಿಸದೆ ಹೊರಗೆ ಹೋಗುವಂತಿಲ್ಲ ಎಂದು ಹೇಳುತ್ತಿದ್ದೆ, ಈ ತಂತ್ರ ಯಶಸ್ಸು ಕಂಡಿತು ಎಂಬ ಮಾಹಿತಿಯನ್ನು ಂಚಿಕೊಂಡರು.