ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರನ್ನು ಗೌರವಿಸಲಾಯಿತು. ಉಮಾದೇವಿ ಉರಾಳ್, ಟಿ.ಕೆ.ರಮೇಶ್ ಶೆಟ್ಟಿ, ಡಿ.ಪ್ರಸನ್ನ, ಲೀಲಾವತಿ ಇತರರಿದ್ದರು. 
ನ್ಯೂಸ್

ಹಲವು ಶಾಲೆಗಳಲ್ಲಿ ಸೌಲಭ್ಯದ ಕೊರತೆ

ತೀರ್ಥಹಳ್ಳಿ: ರಾಜ್ಯದ ಏಳು ಸಾವಿರಕ್ಕೂ ಅಧಿಕ ಶಾಲೆಗಳು ಶಿಕ್ಷಕರ ಕೊರತೆ ಸೇರಿ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಭಾಷೆಯನ್ನು ಉಳಿಸುವ ಮಾತನಾಡುತ್ತೇವೆ. ಆದರೆ 7800 ಕನ್ನಡ ಶಾಲೆಗಳಿಗೆ ಶಿಕ್ಷಕರ ಕೊರತೆ ಇದೆ. ಅವೆಲ್ಲವೂ ಏಕೋಪಾಧ್ಯಾಯ ಶಾಲೆಗಳಾಗಿವೆ. ಸರ್ಕಾರಿ ಶಾಲೆಯೊಂದಕ್ಕೆ ನಾನು ಭೇಟಿ ಕೊಟ್ಟಿದ್ದ ವೇಳೆ ಏಳನೇ ತರಗತಿಯ ವಿದ್ಯಾರ್ಥಿನಿ ಮೂರನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವುದನ್ನು ಗಮನಿಸಿದ್ದೇನೆ ಎಂದರು.

ರಾಜ್ಯದ 7 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿರುವ ಭೂಮಿಗೆ ಹಕ್ಕುಪತ್ರಗಳೇ ಇಲ್ಲ. ಇಷ್ಟೇ ಏಕೆ ಶೇ.99 ಶಾಲೆಗಳ ಶೌಚಗೃಹಗಳಿಗೆ ನೀರಿನ ವ್ಯವಸ್ಥೆಯೇ ಇಲ್ಲ. ಈ ಬಗ್ಗೆ ಗಮನಹರಿಸಬೇಕಾದವರು ಏನು ಮಾಡುತ್ತಿದ್ದಾರೆ ಎಂಬುದೇ ಪ್ರಶ್ನೆ. ಶಾಲೆಗೆ ದಾನ ಕೊಟ್ಟಿರುವ ಭೂಮಿಯನ್ನು ದಾನಿಗಳ ಕುಟುಂಬದವರು ಹಿಂಪಡೆದು ಮತ್ತೊಬ್ಬರಿಗೆ ಮಾರಾಟ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಹೀಗಿದ್ದಾಗ ಕನ್ನಡವನ್ನು ಉಳಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕವಿಗಳು ಕಟ್ಟಿದ ಕಾವ್ಯವನ್ನು ಇತಿಹಾಸವೆಂದೂ, ಇತಿಹಾಸವನ್ನು ಪುರಾಣವೆಂದು ಹೇಳುವ ಮೂಲಕ ಕನ್ನಡದ ವಿವೇಕವನ್ನೇ ಗೊಂದಲಕ್ಕೆ ಸಿಲುಕಿಸಲಾಗಿದೆ. ರಾಜಕೀಯ ಕಾರಣಗಳಿಗಾಗಿ ಪ್ರಸ್ತುತ ಕಾವ್ಯ ಪುರಾಣ ಇತಿಹಾಸವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡದ ವಿವೇಕವನ್ನು ಅತ್ಯಂತ ಕಾಳಜಿಯಿಂದ ಮೂಡಿಸಬೇಕಿದೆ. ನಮ್ಮ ಧರ್ಮವೇ ಶ್ರೇಷ್ಠ ಎನ್ನುವ ನಾವುಗಳು ಪರರ ಧರ್ಮ ಮತ್ತು ವಿಚಾರವನ್ನೂ ಗೌರವಿಸಬೇಕಿದೆ. ಧರ್ಮದ ಹೆಸರಿನಲ್ಲಿ ಅನಾಚಾರ ಮಾಡುತ್ತಿರುವವರು ಧರ್ಮಿಷ್ಠರಾಗಿ ಉಳಿದಿದ್ದಾರೆಯೇ ಎಂಬುದನ್ನು ಯೋಚಿಸಬೇಕಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷೆ ಉಮಾದೇವಿ ಉರಾಳ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ, ಲೇಖಕ ಸರ್ಜಾಶಂಕರ್ ಹರಳಿಮಠ, ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಡಾನ್ ರಾಮಣ್ಣ, ಲೀಲಾವತಿ ಜಯಶೀಲ, ನಾಗರಾಜ್, ಗಾಯತ್ರಿ, ಶೇಷಗಿರಿ, ಸೌಳಿ ನಾಗರಾಜ್ ಇದ್ದರು.