ನ್ಯೂಸ್

ಕ್ರೀಡೆಗಳಿಗೆ ದೊರೆಯದ ಪ್ರೋತ್ಸಾಹ

ಕೋಲಾರ: ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಪಾಲಕರು ಮಕ್ಕಳನ್ನು ಅಂಕಗಳಿಕೆಗೆ ಸೀಮಿತವಾಗಿಸದೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು. ಕ್ರೀಡೆಗಳ ಕುರಿತು ತಾತ್ಸಾರ ಬೇಡ ಎಂದು ಬೆಂಗಳೂರು ಉತ್ತರ ವಿವಿ ಕುಲ ಸಚಿವೆ ಪ್ರೊ.ಡಿ.ಕುಮುದಾ ಹೇಳಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯದಿಂದ ಗುರುವಾರ ಪ್ರಾರಂಭವಾದ 5ನೇ ವಾರ್ಷಿಕ ಪುರುಷರ ಹಾಗೂ ಮಹಿಳೆಯರ ಅಂತರ ಕಾಲೇಜು ಅಥ್ಲೆಟಿಕ್​ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವಿ ವ್ಯಾಪ್ತಿಯ ಒಂದು ನೂರಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಭುವನೇಶ್ವರದಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್​ ಕ್ರೀಡಾಕೂಟಕ್ಕೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ಇದೇ ಕ್ರೀಡಾಕೂಟದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇಂದಿನ ಬದಲಾದ ಆಹಾರ ಪದ್ಧತಿಯಲ್ಲಿ ವ್ಯಾಯಾಮ ಅತಿ ಮುಖ್ಯವಾಗಿದೆ. ಆದರೆ ಕ್ರೀಡಾಪಟುಗಳಿಗೆ ಅದರ ಅಗತ್ಯವಿಲ್ಲ, ಅವರ ನಿರಂತರ ಅಭ್ಯಾಸ ಅವರಲ್ಲಿ ಆತ್ಮಸ್ಥೆ$ರ್ಯ ತುಂಬಿ ಆರೋಗ್ಯ ನೀಡುತ್ತದೆ ಎಂದರು.

ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಸಿಂಡಿಕೇಟ್​ ಸದಸ್ಯರಾದ ಗೋಪಾಲಗೌಡ, ಅರ್ಬಾಜ್​, ಜೈ ದೀಪ್​ ಹಾಜರಿದ್ದರು.

* ವಿದ್ಯಾರ್ಥಿಗಳ ಮಿಂಚು

ಅಥ್ಲೆಟಿಕ್​ ಕ್ರೀಡಾಕೂಟದಲ್ಲಿ ಕೆ.ಆರ್​.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಿಂತನ್​ ಹಾಗೂ ಅಬಿದಾ 800 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಚಿಂತನ್​ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ವಿ.ಗಿರೀಶ್​ ನಡುವೆ ಮೊದಲ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯಿತು. ಮಹಿಳೆಯರ ವಿಭಾಗದಲ್ಲಿ ಅಬಿದಾ ಸುಲಭವಾಗಿ ಗುರಿ ಮುಟ್ಟಿದರು. ಲಾಂಗ್​ ಜಂಪ್​ನಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕೆ.ವಿ.ಉಜ್ವಲ್​ ಮೊದಲ ಸ್ಥಾನ ಪಡೆದರು. 4*400 ಮೀಟರ್​ ರಿಲೇಯಲ್ಲಿ ಪುರುಷರು ಹಾಗೂ ಮಹಿಳೆಯರು ಮಿಶ್ರಿತವಾಗಿ ಓಡಿದ್ದು ಗಮನ ಸೆಳೆಯಿತು. ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 88 ಕಾಲೇಜುಗಳಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಶುಕ್ರವಾರವೂ ಸ್ಪರ್ಧೆಗಳು ಇರಲಿವೆ.

ಫಲಿತಾಂಶ:

ಮಹಿಳೆಯರ ವಿಭಾಗ: 800 ಮೀಟರ್​ನಲ್ಲಿ ಕೆಆರ್​ ಪುರ ಸರ್ಕಾರಿ ಪ್ರಥಮ ಕಾಲೇಜು ಅಬಿದಾ ಪ್ರಥಮ, ಬಂಗಾರಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎಸ್​.ವರ್ಷಿಣಿ ದ್ವೀತಿಯ ಹಾಗೂ ಕೆಸ್ಟ್​ ಕಾಲೇಜು ವಿದ್ಯಾರ್ಥಿ ಎಸ್​.ಚಿತ್ರಾ ತೃತೀಯ.

ಪುರುಷರ ವಿಭಾಗ: 800 ಮೀ. ಓಟದಲ್ಲಿ ಕೆಆರ್​ಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಚಿಂತನ್​ ಪ್ರಥಮ, ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ವಿ.ಗಿರೀಶ್​ ದ್ವೀತಿಯ ಹಾಗೂ ಕೇಂಬ್ರಿಡ್ಜ್​ ಕಾಲೇಜಿನ ಚರಣ ವೀರ್​ ಸಿಂಗ್​ ತೃತೀಯ.

ಲಾಂಗ್​ ಜಂಪ್​: ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ವಿ.ಉಜ್ವಲ್​ ಪ್ರಥಮ, ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಮದ್​ ಅಬ್ಬಾಸ್​ ದ್ವೀತಿಯ, ಕೋಲಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿ.ಚರಣ್​ ತೃತೀಯ.