ಬೆಂಗಳೂರು: ಅಧಿಕಾರದಲ್ಲಿರುವ ಪಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಕ್ಷೇತ್ರವನ್ನು ಒಳಗೊಂಡ ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರಕ್ಕೆ ಮತ್ತೊಂದು ಪಕ್ಷದ ಪ್ರಬಲ ನಾಯಕನಿಗಾಗಿ ಗಾಳ ಹಾಕಿ ಕುಳಿತಿರುವುದು ಕಾಂಗ್ರೆಸ್‌ನ ದೌರ್ಬಲ್ಯ ಬಯಲುಗೊಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಸಿ.ಟಿ.ರವಿ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತವೆಂಬ ಆ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸೂಕ್ತ, ಸಮರ್ಥ, ಯೋಗ್ಯ ಮತ್ತು ಗೆಲ್ಲುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳ ಕೊರತೆಯನ್ನು ಕಾಂಗ್ರೆಸ್ ಅನುಭವಿಸುತ್ತಿರುವುದು ನಿಚ್ಚಳವಾಗಿದೆ. ಯೋಗೇಶ್ವರ್ ಹಾಗೂ ಚನ್ನಪಟ್ಟಣ ಕ್ಷೇತ್ರದ ವಸ್ತುಸ್ಥಿತಿ ಬಗ್ಗೆ ನಮ್ಮ ಪಕ್ಷದ ಕೇಂದ್ರ ನಾಯಕರಿಗೆ ಮಾಹಿತಿ ನೀಡಿದ್ದೇವೆ.
ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿಗೆ ಮೀಸಲಿರುವ ಕ್ಷೇತ್ರವಾಗಿದೆ. ಬಿಜೆಪಿ ಏಕಪಕ್ಷೀಯ ನಿರ್ಧಾರಕ್ಕೆ ಬರಲಾಗದು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿರ್ಣಾಯಕರಾಗಿದ್ದು, ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದಂತೂ ನಿಶ್ಚಿತವೆಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದ ಹಗರಣ, ಮುಡಾ ಅಕ್ರಮದಿಂದ ಆಡಳಿತ ಕಾಂಗ್ರೆಸ್ ಪಕ್ಷ ಹೈರಣಾಗಿದೆ. ತಪ್ಪು ಮಾಡಿದವರು ಸಂವಿಧಾನ, ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಭ್ರಷ್ಟಾಚಾರದ ಭೂತ ಬೆನ್ನತ್ತಿರುವ ಕಾರಣ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದಾರೆ ಎಂದು ಛೇಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಹೀಗಾಗಿ ಎರಡೂ ಪ್ರಕರಣಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದ್ದು, ಹೊರಗೆ ಉಳಿದರೆ ಸಂವಿಧಾನ ಮತ್ತು ಕಾನೂನುರೀತ್ಯ ತಪ್ಪಾಗಲಿದೆ ಎಂದು ವಿಶ್ಲೇಷಿಸಿದರು.
‘ಬ್ರ್ಯಾಂಡ್ ಬೆಂಗಳೂರು’ ಡಂಗುರ ಸಾರಿದ್ದೇ ಸಾರಿದ್ದು. ಆದರೆ ಆಗಿದ್ದೇನಿಲ್ಲವೆಂಬುದು ಮಳೆಯಿಂದ ಹೊರಬಿದ್ದಿದೆ. ಅಡಿಗೆ ನೂರು ರೂ. ವಸೂಲಿ ಮಾಡುವುದು ಬೆಂಗಳೂರು ಅಭಿವೃದ್ಧಿಯಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಅತಿಕ್ರಮಣ ತೆರವು, ಚರಂಡಿಗಳ ಸ್ವಚ್ಛತೆ, ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವೆಲ್ಲವನ್ನೂ ನಿಲ್ಲಿಸಿದ್ದು, ಕನಿಷ್ಠಪಕ್ಷ ಓಡಾಡುವವರಿಗೆ ದೋಣಿ, ಈಜು ಪರಿಕರಗಳನ್ನಾದರೂ ನೀಡಲಿದೆ ಎಂದು ಸಿ.ಟಿ.ರವಿ ಕಾಲೆಳೆದರು.