ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 
ನ್ಯೂಸ್

ಗೃಹರಕ್ಷಕ ದಳದ ಸಿಬ್ಬಂದಿಗೆ ತಿಳಿವಳಿಕೆ ಕೊರತೆ

ಶಿವಮೊಗ್ಗ: ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಜನಿವಾರ ತೆಗೆಸಿದ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಂಟ್ ಅಮಾನತು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜನಿವಾರ ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿ ಟಿವಿ ವಿಡಿಯೋ ಪರಿಶೀಲಿಸಲಾಗಿದೆ. ಕಾಲೇಜಿನ ಪ್ರಾಚಾರ್ಯರು ಹಾಗೂ ಡಿಡಿಪಿಐ ಅವರ ಸಮಯಪ್ರಜ್ಞೆ ಹಾಗೂ ಸಕಾಲಿಕಾ ಕ್ರಮಗಳಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಆಗಿಲ್ಲ. ಆದರೆ ಇಬ್ಬರು ಸೆಕ್ಯೂರಿಟಿಗಳ ತಿಳಿವಳಿಕೆ ಕೊರತೆಯಿಂದ ಈ ರೀತಿಯ ಘಟನೆ ನಡೆದಿದೆ ಎಂದಿದ್ದಾರೆ.

ಜನಿವಾರ ಕತ್ತರಿಸಿಲ್ಲ. ಜನಿವಾರವನ್ನು ವಿದ್ಯಾರ್ಥಿ ಕೈಯಿಂದಲೇ ತೆಗೆಯಿಸಲಾಗಿದೆ. ಜನಿವಾರ ಪ್ರಕರಣದ ಕುರಿತು ಸೂಕ್ತ ತನಿಖೆಗೆ ಅದೇಶಿಸಲಾಗಿದೆ. ಅಲ್ಲದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇಲ್ಲಿ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಎಸೆಯುವ ಯಾವ ಕೃತ್ಯವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಜನಿವಾರ ತೆಗೆದು ಬನ್ನಿ ಎನ್ನುವುದು ಸಹ ಒಪ್ಪುವಂತದ್ದು ಅಲ್ಲ. ಈ ಜನಿವಾರದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಂಟ್ ಅಮಾನತು ಮಾಡಿದ್ದಾರೆ. ಅಮಾನತು ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.