ನ್ಯೂಸ್

ಕಾರ್ಮಿಕನಿಗೆ ಆದಾಯ ತೆರಿಗೆ ನೋಟಿಸ್; ಬ್ಯಾಂಕ್​ ಖಾತೆ ಚೆಕ್​ ಮಾಡಿದಾಗ ಕಾದಿದ್ದು ಅಚ್ಚರಿ!

ಉತ್ತರಪ್ರದೇಶ: ಆದಾಯ ತೆರಿಗೆ ನೀಡಿದ ನೋಟೀಸ್​ ನೋಡಿ ಅಚ್ಚರಿಗೊಂಡ ಕಾರ್ಮಿಕನೊಬ್ಬ, ಇದರ ಬೆನ್ನಲ್ಲೇ ತನ್ನ ಬ್ಯಾಂಕ್​ ಖಾತೆ ಪರಿಶೀಲಿಸಿದಾಗ ಕಾದಿದ್ದು ದೊಡ್ಡ ಶಾಕ್​. ಕೆಲ ಕಾಲ ದಿಗ್ಬ್ರಮೆಗೊಳಗಾಗಿದ್ದ ಕಾರ್ಮಿಕ ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ವರದಿಯಾಗಿದೆ.

ಕಾರ್ಮಿಕನ ಖಾತೆಗೆ ಬರೋಬ್ಬರಿ 221 ಕೋಟಿ ರೂ. ಹಣ ಇರುವುದನ್ನು ಆದಾಯ ಇಲಾಖೆ ಪತ್ತೆಹಚ್ಚಿದೆ. ಕೂಡಲೇ ಇಲಾಖೆ ಜಾರಿಗೊಳಿಸಿದ ನೋಟಿಸ್​ ನೋಡಿ ಅಚ್ಚರಿಗೊಂಡ ಕಾರ್ಮಿಕ, ತನ್ನ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದ್ದಾರೆ. ಆಗ ತಿಳಿದುಬಂದಿದ್ದು, ತಮ್ಮ ಖಾತೆಯಲ್ಲಿ 221 ಕೋಟಿ ರೂ. ಹಣವಿದೆ ಎಂಬುದು. ಘಟನೆಯ ಬೆನ್ನಲ್ಲೇ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಕಾರ್ಮಿಕನನ್ನು ಉತ್ತರಪ್ರದೇಶದ ನಿವಾಸಿ ಶಿವಪ್ರಸಾದ್ ನಿಶಾದ್ ಎಂದು ಗುರುತಿಸಲಾಗಿದ್ದು, ದೂರನ್ನು ಪಡೆದ ಪೊಲೀಸ್​​ ಇಲಾಖೆ ಒಮ್ಮೆ ಶಾಕ್​ ಆಗಿದೆ. ಕಾರ್ಮಿಕನ ಅರಿವಿಗೆ ಬಾರದೆ ಬೃಹತ್ ಮೊತ್ತದ ಹಣ ಹೇಗೆ ಬಂತು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಬಂದ ನಂತರವೇ ಭಾರಿ ಮೊತ್ತದ ಹಣದ ಬಗ್ಗೆ ತಿಳಿದುಬಂದಿದೆ.

ನೋಟಿಸ್‌ನಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮತ್ತು 4.5 ಲಕ್ಷ ರೂ. (ಟಿಡಿಎಸ್) ಕಡಿತದ ಬಗ್ಗೆ ತಿಳಿಸಲಾಗಿದೆ. 2019 ರಲ್ಲಿ ಕಳೆದುಹೋದ ಪಾನ್ ಕಾರ್ಡ್ ಬಳಸಿ ತನ್ನ ಹೆಸರಿನಲ್ಲಿ ಯಾರೋ ಖಾತೆ ತೆರೆದಿರಬಹುದು ಎಂದು ಶಿವಪ್ರಸಾದ್​ ಶಂಕಿಸಿದ್ದಾರೆ. "ನಾನು ಕೂಲಿ ಕೆಲಸ ಮಾಡುತ್ತಿದ್ದೇನೆ. ನನಗೆ ತಿಳಿಯದ ದೊಡ್ಡ ಮೊತ್ತಕ್ಕೆ ನಾನು ಆದಾಯ ತೆರಿಗೆಯಿಂದ ನೋಟಿಸ್ ಪಡೆದಿದ್ದೇನೆ" ಎಂದು ಹೇಳಿದ್ದಾರೆ.

"ನಾನು 2019 ರಲ್ಲಿ ನನ್ನ ಪ್ಯಾನ್ ಕಾರ್ಡ್ ಕಳೆದುಕೊಂಡೆ. ನನ್ನ ಖಾತೆಗೆ ಹಣವನ್ನು ಜಮಾ ಮಾಡಲು ಯಾರೋ ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ" ಎಂದು ಕಾರ್ಮಿಕ ಶಿವಪ್ರಸಾದ್ ಹೇಳಿದ್ದಾರೆ,(ಏಜೆನ್ಸೀಸ್).