ಪಟನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಬಡ ಕೂಲಿ ಕಾರ್ಮಿಕರೊಬ್ಬರಿಗೆ ಆದಾಯ ತೆರಿಗೆ ( Income Tax ) ಇಲಾಖೆ 2 ಕೋಟಿ ರೂ.ಗೂ ಅಧಿಕ ತೆರಿಗೆ ನೋಟಿಸ್ ನೀಡಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ತೈಲ ವ್ಯಾಪಾರಿಯೊಬ್ಬರ ಬಳಿ ತಿಂಗಳಿಗೆ 10 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿರುವ ರಾಜೀವ್ ಕುಮಾರ್ ವರ್ಮಾ ಎಂಬುವರಿಗೆ 2 ಕೋಟಿ 3 ಸಾವಿರದ 308 ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೆ, 67 ಲಕ್ಷ ರೂ. ದಂಡವನ್ನು 2 ದಿನದೊಳಗೆ ಪಾವತಿಸಬೇಕು ಅಂತಾನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರಾಜೀವ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಇಷ್ಟು ಕಡಿಮೆ ಆದಾಯ ಇರುವ ನನಗೆ ಇಷ್ಟೊಂದು ತೆರಿಗೆ ನೋಟಿಸ್ ಏಕೆ ಬಂತು ಎಂಬುದು ನನಗೆ ಗೊತ್ತಿಲ್ಲ. ನನ್ನ ಜೀವನ ಪೂರ್ತಿ ದುಡಿದರೂ ನನಗೆ ಇಷ್ಟೊಂದು ಹಣ ಸಿಗುವುದೇ ಇಲ್ಲ. ಹೀಗಿರುವಾಗ ಇಷ್ಟೊಂದು ಹಣ ನಾನು ಹೇಗೆ ಭರಿಸಲಿ. 2015ರಲ್ಲಿ ಕಾರ್ಪೊರೇಷನ್ ಬ್ಯಾಂಕ್ನಲ್ಲಿ 2 ಲಕ್ಷ ರೂ. ಎಫ್‌ಡಿ ಇಟ್ಟಿದ್ದೆ. ಅದನ್ನು 2016ರಲ್ಲಿ ಅವಧಿಗೂ ಮುನ್ನವೇ ತುರ್ತು ಕಾರಣದಿಂದ ಹಿಂಪಡೆದುಕೊಂಡೆ. ಸದ್ಯ 10 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದೇನೆ. ಆದರೆ ಇದ್ದಕ್ಕಿದ್ದಂತೆ ಆದಾಯ ತೆರಿಗೆ ಇಲಾಖೆ 2 ಕೋಟಿ ರೂ. ತೆರಿಗೆ ನೋಟಿಸ್ ಕಳುಹಿಸಿದೆ ಎಂದು ರಾಜೀವ್ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುವ ರಾಜೀವ್ ಅವರಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ದೊಡ್ಡ ಆಘಾತವನ್ನು ಉಂಟುಮಾಡಿದೆ. ತೀವ್ರ ಹತಾಶೆಗೊಂಡ ರಾಜೀವ್, ಗಯಾದಲ್ಲಿರುವ ಆದಾಯ ತೆರಿಗೆ ಕಚೇರಿಯನ್ನು ಸಂಪರ್ಕಿಸಿದರು. ಆದರೆ, ಅಲ್ಲಿನ ಅಧಿಕಾರಿಗಳು ಪಟನಾಗೆ ಹೋಗುವಂತೆ ಹೇಳುತ್ತಿದ್ದಾರೆ. ಏನೋ ಟೆಕ್ನಿಕಲ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನಾನು ಐಟಿ ಕಚೇರಿ ಅಲೆದಾಡುವಂತಾಗಿದೆ ಎಂದು ರಾಜೀವ್ ನೋವು ತೋಡಿಕೊಂಡಿದ್ದಾರೆ.
ಈ ಒಂದು ಘಟನೆ ಮತ್ತೊಮ್ಮೆ ಸರಕಾರಿ ಯಂತ್ರದ ನಿರ್ಲಕ್ಷ್ಯವನ್ನು ಬಯಲು ಮಾಡಿದೆ. ತೆರಿಗೆ ಸ್ಲ್ಯಾಬ್‌ನಲ್ಲಿ ಕಡಿಮೆ ಆದಾಯ ಇರುವ ಬಡ ವ್ಯಕ್ತಿಗೆ 2 ಕೋಟಿ ರೂ.ಗೂ ಹೆಚ್ಚು ತೆರಿಗೆ ನೋಟಿಸ್ ಕಳುಹಿಸಲಾಗಿದೆ. ಮತ್ತು ಈ ಪ್ರಕರಣದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಮತ್ತು ರಾಜೀವ್ ಅವರಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)