ಹುಣಸೂರು: ಕುಟುಂಬ ಕಲಹದಿಂದ ಬೇಸತ್ತು ನೇಣಿ ಬಿಗಿದುಕೊಂಡು ಗಾರೆ ಕೆಲಸ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್.ನಗರ ತಾಲೂಕು ಬಸವಾಪುರ (ಬೆಳ್ಳುಳ್ಳಿ) ಗ್ರಾಮದ ನಿವಾಸಿ ಮಹದೇವ(43) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಮದ್ಯವ್ಯಸನಿಯಾಗಿದ್ದ ಮಹದೇವ್ ನಡೆಗೆ ಬೇಸತ್ತ ಪತ್ನಿ ಸವಿತಾ ಇಬ್ಬರು ಮಕ್ಕಳೊಂದಿಗೆ 7 ತಿಂಗಳ ಹಿಂದೆ ಕೊತ್ತೆಗಾಲದ ತವರುಮನೆಗೆ ತೆರಳಿದ್ದರು. ಇದರಿಂದ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದ ಮಹದೇವ ಮಂಗಳವಾರ ರಾತ್ರಿ ತಾಲೂಕಿನ ಬಿಳಿಕೆರೆ ಹೋಬಳಿ ಮಲ್ಲಿನಾಥಪುರ ಗ್ರಾಮದ ಮಹದೇಶ್ವರಸ್ವಾಮಿ ದೇವಾಲಯದ ಬಳಿಯ ಸಮುದಾಯ ಭವನಕ್ಕೆ ಹೊಂದಿಕೊಂಡಿರುವ ವಿದ್ಯುತ್ ಸರಬರಾಜು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಾಲಯದ ಅರ್ಚಕರು ಎಂದಿನಂತೆ ದೇವಾಲಯದಲ್ಲಿ ಬೆಳಗಿನ ಪೂಜೆ ಸಲ್ಲಿಸಿ ಸುಮಾರು 8 ಗಂಟೆಗೆ ವಿದ್ಯುತ್ ಸರಬರಾಜು ಕೊಠಡಿಯ ಬಾಗಿಲು ತೆರೆಯಲು ಯತ್ನಿಸಿದಾಗ ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಧಾವಿಸಿ ಬಾಗಿಲು ಒಡೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಪತ್ನಿ ನೀಡಿದ ದೂರಿನನ್ವಯ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ದೇಹವನ್ನು ಹಸ್ತಾಂತರಿಸಲಾಯಿತು.