ಬೆಂಗಳೂರು: ಮಾಹಿತಿ ಹಾಗೂ ತಂತ್ರಜ್ಞಾನ ವಲಯದ ಉದ್ಯೋಗಿಗಳಿಗೆ ಸೇವಾಭದ್ರತೆ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಕಾರ್ಮಿಕ ಕಾಯ್ದೆ ವಿನಾಯಿತಿ ವಾಪಸ್ ಪಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆ (ಐಟಿಇಎಸ್), ವ್ಯವಹಾರಿಕ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಒ) ಜ್ಞಾನ ಪ್ರಕ್ರಿಯೆಯ ಹೊರಗುತ್ತಿಗೆ (ಕೆಪಿಒ) ವಲಯವನ್ನು ಇಲಾಖೆ ನಿಗಾದಡಿಗೆ ತರಲು ಗಂಭೀರ ಚಿಂತನೆ ನಡೆದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇತ್ತೀಚೆಗೆ ಹೇಳಿದ್ದರು.
ರಾಜ್ಯದಲ್ಲಿ ಈ ಉದ್ಯಮಕ್ಕೆ ಕೈಗಾರಿಕಾ ಔದ್ಯಮಿಕ ಉದ್ಯೋಗಗಳ (ಸ್ಥಾಯೀ ಆದೇಶಗಳ) ಕಾಯ್ದೆಯಡಿ ನೀಡಲಾಗಿದ್ದ ವಿನಾಯಿತಿ ವಾಪಸ್ ನಿರ್ಧಾರಕ್ಕೆ ಮುನ್ನ ವಿಚಾರ ವಿನಿಮಯ ನಡೆಸಲಿದೆ.
ಸಚಿವರ ಸೂಚನೆಯಂತೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ವಿನಾಯಿತಿ ಹಿಂಪಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಅಪರ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿತ ಉದ್ಯಮ ವಲಯವು 1990ರ ದಶಕದಲ್ಲಿ ಉದಯೋನ್ಮುಖ ಸಂಸ್ಥೆಗಳು ಎಂದು ಗುರುತಿಸಲಾಗಿತ್ತು. ಇವುಗಳ ಬೆಳವಣಿಗೆಗೆ ಸರ್ಕಾರ ಒತ್ತಾಸೆ ನೀಡಿ, ಕೈಗಾರಿಕಾ ಉದ್ಯೋಗಗಳ ಸ್ಥಾಯೀ ಆದೇಶಗಳ ಕಾಯ್ದೆ 1946 ಅನ್ವಯಿಸುವಿಕೆಯನ್ನು ಐದು ವರ್ಷಗಳಿಗೆ ವಿನಾಯಿತಿ ನೀಡಿ, 2014ರ ಜ.25ಕ್ಕೆ ಅಧಿಸೂಚನೆ ಹೊರಡಿಸಿತ್ತು.
ನಂತರ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲೆಂದು ವಿನಾಯಿತಿ ಅವಧಿ ಮತ್ತೆ ಐದು ವರ್ಷಗಳಿಗೆ ವಿಸ್ತರಿಸಿ 2019ರ ಮೇ 5ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿತು. ಇದೀಗ ನಿಗದಿತ ಅವಧಿ ಮುಗಿಯುವ ಮುನ್ನವೇ ಕೈಬಿಡಲು ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ.
ಈ ನಡುವೆ ವಲಯದಲ್ಲಿ ಕೈಗಾರಿಕಾ ವಿವಾದಗಳು, ಸಂಘರ್ಷಗಳು, ಸಕಾರಣಗಳಿಲ್ಲದೆ ನೌಕರರ ವಜಾ, ಲೇ-ಆ್, ಮಹಿಳಾ ನೌಕರರ ಮೇಲೆ ಲೈಂಗಿಕ ದೌರ್ಜನ್ಯ ಇತ್ಯಾದಿ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು, ಹೆಚ್ಚಿನ ಅವಧಿ ಕೆಲಸಕ್ಕೆ ಒತ್ತಡ ಹೇರುತ್ತಿರುವ ದೂರುಗಳು ಸಲ್ಲಿಕೆಯಾಗಿವೆ.
ಉದ್ಯಮಕ್ಕೆ ಉತ್ತೇಜನ ನೀಡುವ ಜತೆಗೆ ನೌಕರರ ಸೇವಾ ಭದ್ರತೆ ದೃಷ್ಟಿಯಿಂದ ಸರ್ಕಾರವು ರಕ್ಷಣೆಗೆ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೈಗಾರಿಕಾ ಕಾಯ್ದೆ ಸ್ಥಾಯೀ ಆದೇಶಗಳ ಅನ್ವಯಕ್ಕೆ ಒತ್ತಡ ಹೆಚ್ಚತೊಡಗಿವೆ.
ಅನೇಕ ವಿವಾದಗಳು ಕಾರ್ಮಿಕ ನ್ಯಾಯಾಲಯ ಹಾಗೂ ಔದ್ಯಮಿಕ ನ್ಯಾಯಾಧಿಕರಣಗಳ ನ್ಯಾಯ ನಿರ್ಣಯಕ್ಕಾಗಿ ಕಳುಹಿಸಲಾಗುತ್ತಿದೆ. ಕೋವಿಡ್ ನಂತರ ಈ ವಲಯದಲ್ಲಿ ಕಾರ್ಮಿಕ ಅನುಚಿತ ನೀತಿ ಪ್ರಕರಣಗಳು ಹೆಚ್ಚತೊಡಗಿದ್ದು, ಇಲಾಖೆಯಲ್ಲಿ ದಾಖಲಾಗುತ್ತಿವೆ.
ನೌಕರರ ಕುಂದುಕೊರತೆಗಳನ್ನು ಕಾನೂನು ಚೌಕಟ್ಟಿನಲ್ಲಿ ಇತ್ಯರ್ಥಪಡಿಸಲು, ಸೇವಾಭದ್ರತೆ ಒದಗಿಸಲು ಹಾಗೂ ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸಲು ಈ ವಲಯದಲ್ಲಿ ಔದ್ಯಮಿಕ ಉದ್ಯೋಗಗಳ ಹಾಗೂ ಕೈಗಾರಿಕಾ ವಿವಾದ ಕಾಯ್ದೆ ಜಾರಿಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕಾಯ್ದೆಗಳಿಂದ ನೀಡಿದ್ದ ವಿನಾಯಿತಿ ಹಿಂಪಡೆಯುವ ಕುರಿತು ಐಟಿ, ಐಟಿಇಎಸ್ ಮತ್ತಿತರ ಸಂಸ್ಥೆಗಳ ಜತೆಗೆ ಸಮಾಲೋಚಿಸಲಿದ್ದು, ಸಚಿವರ ಸೂಚನೆಯಂತೆ ಈ ಕ್ರಮವಹಿಸಲಾಗುತ್ತಿದೆ ಎಂದು ಡಾ.ಜಿ.ಮಂಜುನಾಥ್ ತಿಳಿಸಿದ್ದಾರೆ.