ಎಚ್.ಡಿ.ಕೋಟೆ: ಶಿಕ್ಷಣ ಸಿಗದೆ ಇದ್ದರೆ ಒಬ್ಬ ವ್ಯಕ್ತಿ ಪರಿಪೂರ್ಣವಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ವ್ಯಕ್ತಿಯ ಪರಿಪೂರ್ಣತೆಗೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 250 ಹೊಸ ಶಾಲಾ ಕಟ್ಟಡಗಳನ್ನು ಮಾಡಲಾಗಿದ್ದು, 400 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನವೀಕರಣ ಮಾಡಲಾಗಿದೆ. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಎರಡು ಗುರು ಭವನಗಳನ್ನು ನವೀಕರಣಗೊಳಿಸಲು ಶಾಸಕರ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.
ಶಿಕ್ಷಕರ ಬಹು ವರ್ಷಗಳ ಬೇಡಿಕೆಯಾದ ಏಳನೇ ವೇತನವನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಎಸ್ಸೆಸ್ಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕು ಮೂರನೇ ಸ್ಥಾನಕ್ಕೆ ಕುಸಿದಿದ್ದು, ಸುಧಾರಣೆಗೆ ಕ್ರಮವಹಿಸಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದರು.
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮದನ್‌ಕುಮಾರ್ ಮಾತನಾಡಿ, ಗುರು ಸಮೂಹವನ್ನು ಸ್ಮರಿಸುವ ದಿನವನ್ನು ಶಿಕ್ಷಕ ದಿನವಾಗಿ ಆಚರಿಸಲಾಗುತ್ತಿದೆ. ದೇಶದ ಭವಿಷ್ಯ ಯುವಜನರ ಮೇಲಿದ್ದು, ಅವರನ್ನು ರೂಪುಗೊಳಿಸುವ ಮಹತ್ತರ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ದೇಶದ ಶಕ್ತಿಗಳನ್ನು ಜ್ಞಾನದ ಮೂಲಕ ವೃದ್ಧಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳ ಮುತುವರ್ಜಿ ಬಹಳ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಹಾಗೂ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪುರಸಭಾ ಸದಸ್ಯ ಮಧು ಕುಮಾರ್, ಐಡಿಯಾ ವೆಂಕಟೇಶ್, ಸರಗೂರು ಪಟ್ಟಣ ಪಂಚಾಯಿತಿ ಸದಸ್ಯರಾದ ಸಣ್ಣತಾಯಮ್ಮ, ಎ.ಎಸ್.ಮಹಾದೇವು, ಶಶಿಧರ್, ಕೃಷ್ಣಯ್ಯ, ಎ.ರಾಜು, ನಾಗೇಂದ್ರ, ನಾರಾಯಣಸ್ವಾಮಿ, ಭೀಮಪ್ಪ, ಮಲ್ಲಪ್ಪ ಮಾದಾರ, ಸತೀಶ್, ಸೋಮಸುಂದರ್, ವಸಂತ ಕುಮಾರ್, ಎಚ್.ಎಸ್. ಪ್ರಕಾಶ್, ಮಹೇಶ್, ಭೋಗನಂಜಯ್ಯ, ನಾಗರಾಜು, ಪ್ರತಿಭಾ, ಸಣ್ಣಸೋಮಯ್ಯ, ಪುಟ್ಟರಾಜು, ಪ್ರಸನ್ನಕುಮಾರ್, ಪ್ರಮೋದ್, ರೂಪಾ, ಜ್ಯೋತಿ, ಬಬಿತಾರಾಣಿ, ನಾಗನಾಯಕ, ರಾಜೇಶ್ವರಿ, ಕೆಂಪರಾಜು, ಯಶ್ವಂತ್ ಇದ್ದರು.