| ಕೀರ್ತಿನಾರಾಯಣ ಸಿ. ಬೆಂಗಳೂರು
ಲಘು ಮೋಟಾರು ವಾಹನ (ಎಲ್ಎಂವಿ) ಚಾಲನಾ ಪರವಾನಗಿ (ಡಿಎಲ್) ಪಡೆದಿರುವ ವ್ಯಕ್ತಿ ಸಾರಿಗೆ/ಗೂಡ್ಸ್ ವಾಹನಗಳನ್ನೂ ಓಡಿಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಈ ಹೊಸ ಆದೇಶದಿಂದ ಡಿಎಲ್ ವಿತರಣೆ ಪ್ರಕ್ರಿಯೆಯಲ್ಲಿ ಹಲವು ಗೊಂದಲ ಶುರುವಾಗಿದ್ದು, ಸ್ಪಷ್ಟನೆ ಕೇಳಿ ರಾಜ್ಯ ಸಾರಿಗೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಸದ್ಯ ಜಾರಿಯಲ್ಲಿರುವಂತೆ ಎಲ್ಎಂವಿ ಹಾಗೂ ಟ್ರಾನ್ಸ್ಪೋರ್ಟ್ ವಾಹನಗಳ ಚಾಲನೆಗೆ ಪ್ರತ್ಯೇಕ ಚಾಲನಾ ಪರವಾನಗಿ ಪಡೆಬೇಕು. ಇನ್ನು ಮುಂದೆ ಎಲ್ಎಂವಿ ಡಿಎಲ್ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ನಿಯಮ ಪಾಲಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ನೂತನ ನಿಯಮ ಪಾಲಿಸಿದರೆ ಕೇಂದ್ರ ಸರ್ಕಾರವೇ ರೂಪಿಸಿರುವ ಮೋಟಾರು ವಾಹನ ಕಾಯ್ದೆಯ ನಿಯಮಗಳೇ ಉಲ್ಲಂಘನೆಯಾಗುತ್ತದೆ.
ಯಾವ ವಾಹನಕ್ಕನ್ವಯ?: ಮೋಟಾರು ಸೈಕಲ್, ಟ್ಯಾಕ್ಸಿ, ಕ್ಯಾಬ್, ಟ್ರಾ್ಯಕ್ಟರ್, ಗೂಡ್ಸ್, ಪ್ಯಾಸೆಂಜರ್ ಲಘು ಮೋಟಾರು ವಾಹನ, ಇ ರಿಕ್ಷಾಕ್ಕೆ ಎಲ್ಎಂವಿ ಡಿಎಲ್ ಸಾಕು. ಪ್ರತ್ಯೇಕ ಅನುಮತಿ ಪತ್ರ ಬೇಕಿಲ್ಲ.
8 ರೀತಿಯ ವಾಹನಗಳೂ ಲಘು ಮೋಟಾರು ವಾಹನಗಳೇ ಎಂದು ಮೋಟಾರು ವಾಹನ ಕಾಯ್ದೆಯಲ್ಲಿ ಪರಿಗಣಿಸುತ್ತಿರುವಾಗ ಬೇರೆ ಬೇರೆ ಡಿಎಲ್ ಅಗತ್ಯ ಏನಿದೆ. ಎಲ್ಲವನ್ನೂ ವಿಲೀನಗೊಳಿಸಿ ಎಲ್ಲದಕ್ಕೂ ಒಂದೇ ಎಲ್ಎಂವಿ ಡಿಎಲ್ ಕೊಡಿ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ.
ಕೆಲ ಸೆಕ್ಷನ್ಗಳ ತಿದ್ದುಪಡಿ ಬಗ್ಗೆ ಗೊಂದಲಗಳಿದ್ದು, ಸ್ಪಷ್ಟನೆ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಗೊಂದಲರಹಿತ ಹೊಸ ನಿಯಮ ಜಾರಿಗೆ ತರಲಾಗುತ್ತದೆ.
| ಶಿವರಾಜಪಾಟೀಲ್, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಎಲ್ಎಂವಿ ವಾಹನಕ್ಕೆ ಡಿಎಲ್ ಕೊಟ್ಟ 1 ವರ್ಷದ ನಂತರ ವಾಣಿಜ್ಯ ವಾಹನ ಚಾಲನೆಗೆ ಅನುಮತಿ ಪತ್ರ ಕೊಡಬೇಕು. ಒಂದು ವೇಳೆ ಈಗ ಹೊಸ ಆದೇಶವನ್ನು ಪಾಲಿಸದರೆ ಕೇಂದ್ರ ಸರ್ಕಾರದ ನಿಯಮವನ್ನೇ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸಾರಿಗೆ ಇಲಾಖೆ ಪತ್ರ ಬರೆದಿದೆ.