ನ್ಯೂಸ್

ರಾಜಕೀಯ ಚಿಂತನೆ ಪ್ರಸ್ತುತ: ಪ್ರೊ. ಪಾಟೀಲ್

ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ತತ್ವಾದರ್ಶ ಮತ್ತು ರಾಜಕೀಯ ಚಿಂತನೆ ಪ್ರಸ್ತುತವಾಗಿದ್ದು ಆಡಳಿತ ಯಂತ್ರದ ನಿರ್ವಹಣೆಯಲ್ಲಿ ಮತ್ತು ಸರ್ಕಾರದ ನೀತಿ ನಿರೂಪಣೆಯಲ್ಲಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಬೇಕಿದೆ ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್ ಹೇಳಿದರು.

ಕುವೆಂಪು ವಿವಿಯಲ್ಲಿ ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಬಾಬೂಜಿ ಜಯಂತಿ ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನರಾಮ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಹುದ್ದೆ ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ್ದರು ಎಂದರು. ತಮ್ಮ ಆಡಳಿತಾವಧಿಯಲ್ಲಿ ಹಲವಾರು ಐತಿಹಾಸಿಕ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದರು. ನಾಲ್ಕು ಬಾರಿ ಕಾರ್ಮಿಕ ಮಂತ್ರಿಯಾಗಿ ಸೇವೆ ಸಲ್ಲಿಸಿ ಕಾರ್ಮಿಕ ಸಂಘಟನೆಗಳಿಗೆ ಕೊಟ್ಟ ಕೊಡುಗೆ ಮತ್ತು ಸಹಕಾರ ಅಪ್ರತಿಮವಾದದ್ದು. 70ರ ದಶಕದಲ್ಲಿ ಎರಡು ಅವಧಿಗೆ ಕೃಷಿ ಸಚಿವರಾಗಿ ಆಹಾರ ಕೊರತೆಯಂತಹ ಸಂಕಷ್ಟದ ಸಮಯದಲ್ಲಿ ಹಸಿರುಕ್ರಾಂತಿಗೆ ಕಾರಣರಾದರು ಎಂದರು. ಕೇಂದ್ರದ ಸಂಚಾಲಕ ಪ್ರೊ. ಎ.ಷಣ್ಮುಖ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಉದಗಟ್ಟಿ ವೆಂಕಟೇಶ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಇದ್ದರು.