ವಿಜಯವಾಣಿ ಸುದ್ದಿಜಾಲ ತಿ.ನರಸೀಪುರ
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರೈತರ ಹಿತಾಸಕ್ತಿ ಕಾಪಾಡುವ ಬದ್ಧತೆ ಇದ್ದರೆ ಎಪಿಎಂಸಿ ಕಾಯ್ದೆಯನ್ನು ಮಹಾರಾಷ್ಟ್ರ ಮಾದರಿಯಂತೆ ರಾಜ್ಯದಲ್ಲೂ ಜಾರಿಗೆ ತರಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ರಾಜ್ಯ ಸರ್ಕಾರ ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ಕೊಡುತ್ತೇವೆ ಎಂದು ಹೇಳುತ್ತಿದೆ.ಆದರೆ ಈ ಕಾಯ್ದೆಯಿಂದ ರೈತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ. ಬದಲಿಗೆ ರೈತರು ಮತ್ತಷ್ಟು ಶೋಷಣೆಗೆ ಒಳಗಾಗಲಿದ್ದಾರೆ.ತಿದ್ದು ಪಡಿ ಕಾಯ್ದೆಯಲ್ಲಿ ರೈತರಿಗೆ ಯಾವುದೇ ರಕ್ಷಣಾತ್ಮಕ ಕ್ರಮಗಳಿಲ್ಲ. ಹಿಂದೆ ರೈತ ಮಾರಾಟ ಮಾಡಿದ ಬೆಳೆಗೆ ಮೋಸವಾದರೆ ದೂರು ನೀಡ ಬಹುದಿತ್ತು. ಮಧ್ಯವರ್ತಿಗಳು ಹಾಗೂ ವರ್ತಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅವಕಾಶ ಇತ್ತು. ಆದರೆ ಹೊಸ ಕಾಯ್ದೆಯದಲ್ಲಿ ಅದ್ಯಾವುದಕ್ಕೂ ಅವಕಾಶವಿಲ್ಲ. ರಾಜ್ಯ ಸರ್ಕಾರ ಶ್ರೀಮಂತರು ಹಾಗೂ ಕಾರ್ಪೊರೇಟ್ ಕಂಪನಿಗಳ ವ್ಯವಸ್ಥೆಗೆ ಮಣಿದು ರೈತರಿಗೆ ಅನುಕೂಲವಲ್ಲದ ಎಪಿಎಂಸಿ ಕಾಯ್ದೆ ಜಾರಿಗೆ ತಂದಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಾರಾಷ್ಟ್ರ ಎಪಿಎಂಸಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಲು ಅವಕಾಶವಿಲ್ಲ. ಕಾಯ್ದೆ ಉಲ್ಲಂಘಿಸಿದರೆ ಖರೀದಿದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬಹುದು. ರಾಜ್ಯದಲ್ಲಿಯೂ ಅದೇ ಮಾದರಿಯ ಕಾಯ್ದೆ ಜಾರಿಗೆ ತರಬೇಕೆಂದು ಶಾಂತಕುಮಾರ್ ಒತ್ತಾಯಿಸಿದರು.
ಕೇಂದ್ರದ ಪ್ಯಾಕೇಜ್ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ: ಕೇಂದ್ರ ಸರ್ಕಾರ ಲಾಕ್‌ಡೌನ್‌ನಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾ ರೆಂದು ಪ್ಯಾಕೇಜ್ ಘೋಷಣೆ ಮಾಡಿರುವುದು ರೈತರ ಕಣ್ಣಿಗೆ ಮಣ್ಣೆರೇಚುವ ಕೆಲಸ. ರೈತನಿಗೆ ಬೇಕಾದ ತುರ್ತು ಹಣಕಾಸಿನ ನೆರವು ನೀಡುವಂತಹ ಯಾವುದೇ ಯೋಜನೆ ಪ್ಯಾಕೇಜ್‌ನಲ್ಲಿ ಇಲ್ಲದಿರುವುದು ಬೇಸರದ ಸಂಗತಿ ಎಂದರು.
ರೈತರಿಗೆಲ್ಲ ಸಾಲ ಸಿಗಬೇಕು: ಸಹಕಾರ ಸಚಿವರು ಸೊಸೈಟಿಗಳಲ್ಲಿ ರೈತರಿಗೆ ಸಾಲಕೊಡಿಸುತ್ತೇವೆ. ಇದಕ್ಕಾಗಿ ಹಣ ಬಿಡುಗಡೆ ಸಹ ಮಾಡಿ ದ್ದೇವೆ ಎನ್ನುತ್ತಾರೆ. ಆದರೆ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ. ಸೊಸೈಟಿಗಳು ಯಾರು ಹಳೆಯ ಸಾಲ ಪಾವತಿಸಿದ್ದಾರೋ ಅವರಿಗೆ ಹೊಸ ಸಾಲ ಕೊಡುತ್ತೇವೆ ಎನ್ನುತ್ತಾರೆ. ಇದು ಗೊಂದಲ ಉಂಟು ಮಾಡಿದ್ದು ಎಲ್ಲ ರೈತರಿಗೂ ಸಾಲ ಸಿಗಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಖಾಸಗಿ ಸಾಲವನ್ನು 6 ತಿಂಗಳು ಮುಂದೂಡಿ : ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಂಘಟನೆಗಳು ಖಾಸಗಿ ಫೈನಾನ್ಸ್‌ಗಳಿಂದ ವಾರ ಹಾಗೂ ತಿಂಗಳ ಬಡ್ಡಿಗೆ ಸಾಲ ಪಡೆದು ಹಣದ ಬಟವಾಡೆ ಮಾಡುತ್ತಿದ್ದವು. ಆದರೀಗ ಲಾಕ್‌ಡೌನ್ ಸಮಸ್ಯೆ ಎದುರಾಗಿರುವುದರಿಂದ ಮಹಿಳಾ ಮತ್ತು ಸ್ವಸಹಾಯ ಸಂಘಟನೆಗಳು ಸಂಕಷ್ಟಕ್ಕೆ ಸಿಲುಕಿವೆ. ಸಾಲ ನೀಡಿರುವ ಖಾಸಗಿ ಫೈನಾನ್ಸ್‌ಗಳು ವಸೂಲಾತಿಯನ್ನು ಕನಿಷ್ಠ 6 ತಿಂಗಳು ಮುಂದೂಡಲು ಸರ್ಕಾರ ಕ್ರಮ ವಹಿಸುವುದರ ಮೂಲಕ ಮಹಿಳೆಯರ ಹಿತ ಕಾಯಲು ಮುಂದಾಗಬೇಕೆಂದು ಶಾಂತ ಕುಮಾರ್ ಒತ್ತಾಯಿಸಿದರು.ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಉಪಾಧ್ಯಕ್ಷ ರಂಗರಾಜು, ಪ್ರಧಾನ ಕಾರ್ಯದರ್ಶಿ ಪ್ರಸಾದ್‌ನಾಯಕ್,ರೈತ ಮುಖಂಡ ಕುರುಬೂರು ಗೌರಿಶಂಕರ್, ರೇವಣ್ಣ, ಕುಪ್ಯ ಜವರಯ್ಯ, ಆರಾಧ್ಯ, ಪ್ರಭುಸ್ವಾಮಿ, ಶೇಖರ್,ಅಪ್ಪಣ್ಣ,ಕುರುಬೂರು ಕುಮಾರ್ ಮತ್ತಿತರರಿದ್ದರು.