oplus_0 
ನ್ಯೂಸ್

ಗಣತಿಯಲ್ಲಿ ಸರಿಯಾದ ಮಾಹಿತಿ ನಮೂದಿಸಿ; ಪ್ರಕಾಶ ಕೋಳಿವಾಡ

ರಾಣೆಬೆನ್ನೂರ: ಸಿಎಂ ಸಿದ್ದರಾಮಯ್ಯನವರು ಸಮಸಮಾಜ ನಿರ್ಮಾಣ ಮಾಡಬೇಕು ಮತ್ತು ಬಜೆಟ್​ನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಜಾತಿಗಣತಿ ಆರಂಭಿಸಿದ್ದು, ಪ್ರತಿಯೊಬ್ಬರೂ ಗಣತಿಯಲ್ಲಿ ಸರಿಯಾದ ಮಾಹಿತಿ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ಕುರುಬಗೇರಿ ಕಂಬಳಿ ಗಲ್ಲಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ, ಜಿಲ್ಲಾಡಳಿತ, ಜಿಪಂ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಸಮಾಜದವರ ಜನಸಂಖ್ಯೆ ಆಧಾರದ ಮೇಲೆ ಯಾವ ಸಮಾಜಕ್ಕೆ ಏನು ನೀಡಬೇಕು ಎಂಬುದನ್ನು ಚಿಂತನೆ ಮಾಡಿ ಮುಂಬರುವ ದಿನದಲ್ಲಿ ವೈಜ್ಞಾನಿಕ ಬಜೆಟ್​ ಮಂಡಿಸಬೇಕು ಎಂಬುದು ಸಿದ್ದರಾಮಯ್ಯನವರ ಉದ್ದೇಶವಾಗಿದೆ. ಸಮಾಜದಲ್ಲಿ ಯಾರೂ ಹಸಿವು, ಅನ್ನ ನೀರಿನಿಂದ ಬಳಲಬಾರದು. ಆದ್ದರಿಂದ ಗಣತಿಗೆ ಚಾಲನೆ ನೀಡಲಾಗಿದೆ ಎಂದರು.

ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮಾತನಾಡಿ, ತಾಲೂಕಿನಲ್ಲಿ 810 ಗಣತಿದಾರರು ಮತ್ತು 57 ಮೇಲ್ವಿಚಾರಕರನ್ನು ಗಣತಿ ಕಾರ್ಯಕ್ಕೆ ನೇಮಕ ಮಾಡಲಾಗಿದೆ. ಆ್ಯಪ್​ ಮೂಲಕ ಗಣತಿ ನಡೆಯಲಿದೆ. ಯಾರೂ ತಪು$್ಪ ಮಾಹಿತಿ ನೀಡಬಾರದು. ಸರ್ಕಾರ ನಿಮ್ಮ ಮಾಹಿತಿಯನ್ನು ತನ್ನ ಹಂತದಲ್ಲಿಯೆ ಇಟ್ಟುಕೊಳ್ಳಲಿದೆ ಹೊರತು ಎಲ್ಲಿಯೂ ಬಹಿರಂಗ ಪಡಿಸುವುದಿಲ್ಲ. ಗಣತಿದಾರರು ಮನೆಗೆ ಬಂದಾಗ ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡಬೇಕು. ಯಾರನ್ನು ವಾಪಸ್​ ಕಳುಹಿಸಬಾರದು ಎಂದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಬಿಇಒ ಶ್ಯಾಮಸುಂದರ ಅಡಿಗ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ, ವಕೀಲ ಮೃತ್ಯುಂಜಯ ಗುದಿಗೇರ, ಸಿದ್ದಪ್ಪ ದೇವರಗುಡ್ಡ, ರವಿ ಹುಲಗಮ್ಮನವರ, ಆನಂದ ಹುಲ್ಮನಿ, ಮಹೇಶ ಕಂಬಳಿ, ಬಸವರಾಜ ಕಂಬಳಿ, ಮರಿಯಪ್ಪ ಪೂಜಾರ, ಕೃಷ್ಣಪ್ಪ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.