ನ್ಯೂಸ್

ಸಮಯ 2:30... ಕರ್ನೂಲ್​ ಬಸ್​ ಅಪಘಾತ ವಿವರಿಸಿದ ಪವಾಡದಂತೆ ಬದುಕುಳಿದ ಪ್ರಯಾಣಿಕ | Kurnool

Kurnool Bus Accident: ಇಂದು (ಅ.24) ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಎಸಿ ಕೋಚ್​​ನ ಬಸ್​ನಲ್ಲಿ ದಿಢೀರ್​ ಅಗ್ನಿ ಹೊತ್ತಿಕೊಂಡ ಕಾರಣ ದುರಂತದಲ್ಲಿ 19 ಪ್ರಯಾಣಿಕರು ಸುಟ್ಟು ಕರಕಲಾಗಿದ್ದು, 22 ಮಂದಿ ಅದೃಷ್ಟವಶಾತ್​ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಇಬ್ಬರೂ ಚಾಲಕರು ಸಾವಿನಿಂದ ಬಚಾವ್ ಆಗಿದ್ದಾರೆ.

ಬೆಂಕಿ ಅದಾಗಲೇ ಹತ್ತಿಕೊಂಡಿತ್ತು

ಅಗ್ನಿ ಅವಘಡದಿಂದ ಪವಾಡದಂತೆ ಬದುಕುಳಿದ ಪ್ರಯಾಣಿಕರ ಪೈಕಿ ಜಯಂತ್ ಕುಶ್ವಾಹಃ, ಅಶ್ವಿನ್ ಮತ್ತು ಅಶೋಕ್ ಮೈನಡುಗುವ ಅನುಭವವನ್ನು ವಿವರಿಸಿದ್ದಾರೆ. "ನನ್ನ ಪ್ರಕಾರ, ಸುಮಾರು 2:30ರ ಸಮಯಕ್ಕೆ ನಾನು ಎಚ್ಚರಗೊಂಡೆ. ಆಗ ಬಸ್​ ನಿಂತಿತ್ತು. ಬೆಂಕಿ ಅದಾಗಲೇ ಹೊತ್ತಿಕೊಂಡಿತ್ತು. ನಾವು ಮೂವರು ಮಾತ್ರ ಎದ್ದಿದ್ದೆವು. ಉಳಿದ ಪ್ರಯಾಣಿಕರು ನಿದ್ರೆಗೆ ಜಾರಿದ್ದರು. ತಕ್ಷಣವೇ ಎಲ್ಲರನ್ನು ಎಬ್ಬಿಸಿ, ಬಸ್​ನ ಬಾಗಿಲು ತೆರೆಯಲು ನೋಡಿದೆವು. ಆದರೆ, ಡೋರ್​ಗಳು ಬಿಗಿಯಾಗಿ ಲಾಕ್​ ಆಗಿತ್ತು" ಎಂದಿದ್ದಾರೆ.

"ಈ ವೇಳೆ ಬಸ್​ನ ಚಾಲಕರನ್ನು ಪತ್ತೆಹಚ್ಚಲು ಹುಡುಕಾಡಿದೆವು. ಅವರು ಅಲ್ಲಿರಲಿಲ್ಲ. ಕೂಡಲೇ ತುರ್ತು ಕಿಟಕಿಯನ್ನು ಒಡೆದು, ರಸ್ತೆಗೆ ಜಿಗಿದೆವು. ನಮ್ಮೊಂದಿಗೆ ಹಲವರು ಪ್ರಾಣಪಾಯದಿಂದ ಪಾರಾದರು. ಆದರೆ, ಕೆಲವರು ಬಚಾವ್ ಆಗಲು ಸಾಧ್ಯವಾಗಲಿಲ್ಲ ಎಂಬ ವಿಷಯ ಬೇಸರ ತಂದಿತು. ಘಟನೆಗೂ ಮುನ್ನ, ಯಾವುದೋ ಒಂದು ವಸ್ತು ಜೋರಾಗಿ ಸ್ಪೋಟಗೊಂಡ ಶಬ್ದಕ್ಕೆ ನಾನು ಎಚ್ಚರಗೊಂಡೆ. ಆಗ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತುರ್ತು ಕಿಟಕಿಯಿಂದ ನನ್ನೊಂದಿಗೆ ಇತರೆ ಪ್ರಯಾಣಿಕರು ಜಿಗಿದರು" ಎಂದು ಮತ್ತೊಬ್ಬ ಪ್ರಯಾಣಿಕ ಅಶೋಕ್ ಘಟನೆಯನ್ನು ವಿವರಿಸಿದರು.

ಪೆಟ್ರೋಲ್​ ಲೀಕ್​ ಆಗಿ ಬೆಂಕಿ

ಬಸ್​ನಲ್ಲಿ ಒಟ್ಟು 41 ಜನರಿದ್ದರು. ಅವರಲ್ಲಿ ಇಬ್ಬರು ಚಾಲಕರಿದ್ದರು. ಬೈಕ್​ಗೆ ಡಿಕ್ಕಿ ಹೊಡೆದ ಬಸ್, ಒಂದಷ್ಟು ದೂರ ಬೈಕ ಅನ್ನು​ ಎಳೆದೊಯ್ದಿತು. ಈ ವೇಳೆ, ಗಾಡಿಯ ಟ್ಯಾಂಕ್​ನಿಂದ ಪೆಟ್ರೋಲ್​ ಲೀಕ್​ ಆಗಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತ ಸಂಭವಿಸಿದ ಬಳಿಕ ಬಸ್​ ನಿಲ್ಲಿಸುವ ಬದಲು ಬೈಕ್​ ಎಳೆದೊಯ್ದಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಅಸಲಿಗೆ, ಬಸ್​ನ ಡಿಸೇಲ್​ ಟ್ಯಾಂಕ್​ಗೆ ಅಗ್ನಿ ತಗುಲಿಲ್ಲ. ಆದರೆ, ಬಸ್​ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).