ನ್ಯೂಸ್

ಕುಣಿಗಲ್, ಮಾಗಡಿ ಕುಡಿವ ನೀರೊದಗಿಸಲು 985 ಕೋಟಿ ಯೋಜನೆ

Bengaluru - Political - Shivananda Tagadur

ಬೆಂಗಳೂರು:
ಹೇಮಾವತಿ ನೀರನ್ನು ತುಮಕೂರು ಶಾಖಾ ನಾಲೆಯ ಮೂಲಕ ಮಾಗಡಿ ಮತ್ತು ಕುಣಿಗಲ್ ತಾಲೂಕಿಗೆ ಕುಡಿಯುವ ಉದ್ದೇಶಕ್ಕೆ ನೀರೊದಗಿಸಲು 985 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಅದನ್ನು ತ್ವರಿತ ಗತಿಯಲ್ಲಿ ಚಾಲನೆ ನೀಡಲು ಸರ್ಕಾರ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆ ಭಾಗದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿಯೇ ಈ ಯೋಜನೆ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ನೀರು ಹರಿಸಲು ತುರುವೇಕರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ವ್ಯಕ್ತವಾಗಿರುವ ವಿರೋಧದ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿತ್ತು.
ಕುಣಿಗಲ್ ಮತ್ತು ಮಾಗಡಿ ಕಾವೇರಿ ಜಲಾನಯನ ಪ್ರದೇಶದಲ್ಲಿಯೇ ಬರುತ್ತಿದ್ದು, ಅಲ್ಲಿಗೆ ನೀರು ಹಂಚಿಕೆ ಪ್ರಕಾರವೇ ನೀರು ಹರಿಸಲು ಉದ್ದೇಶಿಸಲಾಗಿದೆಯೇ ಹೊರತು, ಬೇರೆ ಕಾರಣದಿಂದ ಅಲ್ಲ ಎನ್ನುವುದನ್ನು ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕುಣಗಲ್ ಭಾಗಕ್ಕೆ ಹರಿಯಬೇಕಾಗಿದ್ದ ಹಂಚಿಕೆಯ ನೀರಿನಲ್ಲಿ ಈ ತನಕ ಶೇ.10ರಷ್ಟು ಮಾತ್ರ ನೀರು ಹರಿದಿದೆ. ಆದ್ದರಿಂದ ಆ ಭಾಗದ ಜನರಿಗೆ ಶೇ.90ರಷ್ಟು ನೀರು ಪಡೆಯುವ ಸಹಜ ಹಕ್ಕು ಇದೆ. ಈ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕು. ಪರಸ್ಪರ ಹೊಂದಾಣಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
97 ಕಿ.ಮೀ.ಬದಲಿಗೆ ಸರ್ಕ್ಯೂಟ್ ಮಾಡಿ ಕೇವಲ 37 ಕಿ.ಮೀ. ಉದ್ದದಲ್ಲಿಯೇ ಕುಣಿಗಲ್ ಮತ್ತು ಮಾಗಡಿಗೆ ನೀರು ಹರಿಸಲು ಸಾದ್ಯವಿದೆ ಎನ್ನುವುದನ್ನು ಅಧಿಕಾರಿಗಳು ಸಭೆಯಲ್ಲಿ ಮನದಟ್ಟು ಮಾಡಿ ಮ್ಯಾಪ್ ಮೂಲಕ ಯೋಜನೆಯ ಸ್ವರೂಪವನ್ನು ವಿವರಿಸಿದ್ದಾರೆ.
ಕುಣಿಗಲ್ ಮತ್ತು ಮಾಗಡಿ ಭಾಗಕ್ಕೆ ನೀರು ಹರಿಸುವುರಿಂದ ತುರುವೇಕೆರೆ, ಗುಬ್ಬಿ ಭಾಗಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ, ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಶಾಸಕರಾದ ಷಡಕ್ಷರಿ, ಎಂ ಟಿ ಕೃಷ್ಣಪ್ಪ, ಸುರೇಶ್, ಸುರೇಶ್ ಗೌಡ, ಗಣೇಶ್, ಡಾ. ರಂಗನಾಥ್, ಮಾಗಡಿ ಬಾಲಕೃಷ್ಣ, ಗುಬ್ಬಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.