ಕಳಸದ ಕುಂಬಳಡಿಕೆಯಲ್ಲಿ ನಿವೇಶನ ರಹಿತರು ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡಿರುವುದು.  
ನ್ಯೂಸ್

ಕುಂಬಳಡಿಕೆ ನಿವೇಶನ ರಹಿತರಿಗೆ ಸಿಹಿಸುದ್ದಿ

ಕಳಸ: ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳಡಿಕೆ ಎಂಬಲ್ಲಿ ತಾತ್ಕಾಲಿಕ ಟೆಂಟ್ ಹಾಕಿ ನಿವೇಶನಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಾಲ್ಕು ವರ್ಷವಾದರೂ ಹಕ್ಕುಪತ್ರ ಸಿಗದ ಹಿನ್ನೆಲೆಯಲ್ಲಿ ಸಂತ್ರಸ್ತರು ಪ್ರಧಾನಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಧಾನಿ ಕಚೇರಿಯಿಂದ ಸೂಚನೆ ನೀಡಲಾಗಿದೆ.

ಕಳಸ ತಾಲೂಕಿನ ವಿವಿಧ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ 46 ಪರಿಶಿಷ್ಟ ಜಾತಿ ಮತ್ತು ವರ್ಗದ ಕುಟುಂಬಗಳು 2019ರಲ್ಲಿ ನಿವೇಶನಕ್ಕಾಗಿ ಕುಂಬಳಡಿಕೆಯ ಸರ್ವೇ ನಂ.153ರ ಕಂದಾಯ ಭೂಮಿಯಲ್ಲಿ ನಿವೇಶನ ನೀಡುವಂತೆ ತಾತ್ಕಾಲಿಕ ಟೆಂಟ್ ಹಾಕಿ ಹೋರಾಟ ಪ್ರಾರಂಭಿಸಿದ್ದರು.
2020ರಲ್ಲಿ ಅಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು. ಶಾಸಕರ ಮೇಲಿನ ಅಭಿಮಾನಕ್ಕಾಗಿ ಈ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಎಂದು ವಸತಿರಹಿತರು ಹೆಸರಿಟ್ಟಿದ್ದರು. ಇದರಂತೆ 2022ರಲ್ಲಿ ನಿವೇಶನ ಕಾಯ್ದಿರಿಸಲಾಯಿತು. ಇದಾಗಿ ಎರಡು ವರ್ಷ ಕಳೆದರೂ ಹಕ್ಕುಪತ್ರ ಮತ್ತು ಮೂಲ ಸೌಲಭ್ಯ ಸಿಗದ ಕಾರಣ 2022ರ ಜೂನ್‌ನಲ್ಲಿ ಕಳಸ ತಾಲೂಕು ಕಚೇರಿ ಎದುರು ನಿವೇಶನರಹಿತರು ಧರಣಿ ಆರಂಭಿಸಿದರು. ಈ ಮಧ್ಯೆ ಹೋರಾಟಗರರ ಒತ್ತಾಯಕ್ಕೆ ಕುಮಾರಸ್ವಾಮಿ ಸ್ಪಂದಿಸದಿದ್ದಾಗ ಬಡಾವಣೆ ಹೆಸರನ್ನು ಬದಲಿಸಲು ತೀರ್ಮಾನಿಸಿದ್ದರು.
ಹಕ್ಕುಪತ್ರ ಸಿಗದ ಹಿನ್ನೆಲೆಯಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡ ಸಂಜೀವ ಎಂಬುವವರು ಕಳೆದ ಜು.10ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಇದಕ್ಕೆ ಸರಾತ್ಮಕವಾಗಿ ಸ್ಪಂದಿಸಿದ ರಾಷ್ಟ್ರಪತಿ ಕಚೇರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜು.20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಆದೇಶಿಸಿದೆ. ಅಲ್ಲದೆ ಆ.17ರಂದು ಪ್ರಧಾನ ಮಂತ್ರಿ ಕಚೇರಿಯಿಂದ ಕರೆಮಾಡಿ ಪ್ರಧಾನಿ ನಿಮ್ಮ ಜತೆ ಮಾತನಾಡಲಿದ್ದಾರೆ ಎಂದು ತಿಳಿಸಿ ನಿವೇಶನ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
ಹೋರಾಟಕ್ಕೆ ಸಿಗದ ಬೆಂಬಲ: ಐದು ದಶಕದಿಂದ ನಾವು ತೋಟದ ಲೈನ್‌ಗಳಲ್ಲಿ ಇದ್ದವರು. ಇದೀಗ ಸ್ವಂತ ಮನೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಆದರೆ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ನಮಗೆ ಬೆಂಬಲ ನೀಡದಿರುವುದು ಬೇಸರ ತಂದಿದೆ. ವಿದ್ಯುತ್ ಇಲ್ಲದೆಯೇ ಕ್ಯಾಂಡಲ್ ಬೆಳಕಿನಲ್ಲಿ ಓದಿ ಇಲ್ಲಿನ ವಿದ್ಯಾರ್ಥಿನಿಯೊಬ್ಬಳು 10ನೇ ತರಗತಿಯಲ್ಲಿ ಶೇ.94 ಅಂಕ ಪಡೆದಿದ್ದಾಳೆ. ನಮ್ಮ ಟೆಂಟ್ ಪಕ್ಕದಲ್ಲೇ ವಿದ್ಯುತ್ ಲೈನ್ ಹಾದುಹೋಗಿದ್ದರೂ ನಮ್ಮ ಬಡಾವಣೆಗೆ ವಿದ್ಯುತ್ ಪೂರೈಕೆ ಸಿಕ್ಕಿಲ್ಲ. ನೀರಿನ ವ್ಯವಸ್ಥೆ ಇಲ್ಲದೆ ನಾವೆಲ್ಲ ಮಳೆ ನೀರು ಕುಡಿದು ಬದುಕಿದ್ದೇವೆ. ನಮಗಾಗಿ 5 ಎಕರೆ ಮಂಜೂರಾಗಿದ್ದರೂ ನಿವೇಶನ ಹಂಚಿಕೆಯಾಗಿಲ್ಲ.
ಹಕ್ಕುಪತ್ರ ಸಿಗುವ ಭರವಸೆ: ಪರಿಶಿಷ್ಟ ಜಾತಿ ಮತ್ತು ವರ್ಗದ 46 ಕುಟುಂಬಗಳು ನಾಲ್ಕು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ ನಿವೇಶನ ಹಂಚಿಕೆ ಹಕ್ಕುಪತ್ರ ಸಿಕ್ಕಿಲ್ಲ. ಉಳ್ಳವರಿಗೆ ಭೂಮಿ ಮಂಜೂರು ಮಾಡಿಕೊಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಡವರಿಗೆ ಒಂದು ನಿವೇಶನ ಕೊಡಬೇಕು ಎನ್ನುವ ಕಾಳಜಿ ತೋರುತ್ತಿಲ್ಲ. ಆದ್ದರಿಂದ ನಮ್ಮ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಈ ಬಗ್ಗೆ ಪ್ರಧಾನಿ ಮತ್ತು ರಾಷ್ಟ್ರಪತಿ ಗಮನ ಸೆಳೆಯಲಾಗಿದೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂತಸ ತಂದಿದೆ. ಇನ್ನಾದರೂ ಹಕ್ಕುಪತ್ರ ಸಿಗಬಹುದೆಂಬ ಆಶಾಭಾವನೆ ನಮ್ಮದು ಎನ್ನುತ್ತಾರೆ ಮುಖಂಡ ಸಂಜೀವ್.
ಕಳಸ ತಾಲೂಕಿನ ಕುಂಬಳಡಿಕೆಯಲ್ಲಿರುವ ನಿವೇಶನ ರಹಿತರಿಗೆ ಸರ್ಕಾರದಿಂದ ನಾಲ್ಕು ಎಕರೆ ಭೂಮಿ ಮಂಜೂರಾಗಿದೆ. ಜಾಗದ ಪಹಣಿಯೂ ಬಂದಿದೆ. ಮುಂದಿನ ಪ್ರಕ್ರಿಯೆಗಾಗಿ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಕಳಿಸಿಕೊಡಲಾಗಿದೆ ಎಂದು ಕಳಸ ತಹಸೀಲ್ದಾರ್ ಮಂಜುನಾಥ್ ಮಾಹಿತಿ ನೀಡಿದರು.
ಕಳಸ ತಾಲೂಕಿನ ಕುಂಬಳಡಿಕೆಯ ನಿವೇಶನ ರಹಿತರಿಗೆ ಭೂಮಿ ಮಂಜೂರಾಗಿ ಪಹಣಿಯೂ ಬಂದಿದೆ. ಆದರೆ ಭೂಮಿಯಲ್ಲಿರುವ ಮರಗಳನ್ನು ಕಡಿತಲೆ ಮಾಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರಿಂದ ಈವರೆಗೆ ಯಾವುದೆ ಕ್ಲಿಯರೆನ್ಸ್ ಬಂದಿಲ್ಲ. ಮರ ಕಡಿತಲೆ ಆದ ಕೂಡಲೇ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂಬುದು ಕಳಸ ಪಿಡಿಒ ಕವೀಶ್ ಅವರ ಅಭಿಪ್ರಾಯ.