ನ್ಯೂಸ್

ಕುಮಾರಸ್ವಾಮಿ ಆರೋಪ ನಿರಾಧಾರ: ಸಚಿವ ಎಂ.ಬಿ ಪಾಟೀಲ | There should be discipline in the party

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಾನು ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಸೆಮಿಕಂಡಕ್ಟರ್ ಸೇರಿದಂತೆ ಕೈಗಾರಿಕಾ ವಲಯದ ಹಲವು ಬೇಡಿಕೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ.

ಆ ಸಂದರ್ಭದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಿದ್ದೆ. ಹೀಗಾಗಿ ರಾಜ್ಯ ಸರ್ಕಾರ ಅಸಹಕಾರ ತೋರಿಸುತ್ತಿದೆ ಎನ್ನುವುದು ಸರಿಯಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ` ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಇವರನ್ನೆಲ್ಲ ಆಹ್ವಾನಿಸಲು ಸದ್ಯದಲ್ಲೇ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆಗಲೂ ಇದನ್ನೆಲ್ಲ ದಾಖಲೆಗಳ ಸಮೇತ ಕುಮಾರಸ್ವಾಮಿಗೆ ನೆನಪಿಸಲಾಗುವುದು. ನಿರ್ಮಲಾ ಸೀತಾರಾಮನ್ ಮತ್ತು ರಾಜನಾಥ್ ಸಿಂಗ್ ಬಳಿ ಕೂಡ ನಾನು ಹಿಂದೆ ಭೇಟಿಯಾಗಿದ್ದಾಗ ರಾಜ್ಯದ ಬೇಡಿಕೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೆ’ ಎಂದಿದ್ದಾರೆ.

ರಾಜ್ಯಕ್ಕೆ ಉದ್ದಿಮೆ ತರಲಿ

ಕುಮಾರಸ್ವಾಮಿ ಕೂಡ ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಕೂಡ ಒಂದು ಹೆಜ್ಜೆ ಮುಂದೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು. ರಾಜ್ಯಕ್ಕೆ ಉದ್ದಿಮೆಗಳನ್ನು ತಂದರೆ ಅವರಿಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.

ಹಿಂದೆ ಭೇಟಿಯಾಗಿದ್ದಾಗ ಸೆಮಿಕಂಡಕ್ಟರ್ ಉದ್ದಿಮೆಗಳು ಮೊದಲು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರೂ ಕೊನೆಗೆ ಗುಜರಾತಿಗೆ ಹೋಗುತ್ತಿರುವ ವಿದ್ಯಮಾನದ ಬಗ್ಗೆ ಚರ್ಚಿಸಿದ್ದೆ. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಇರಬಾರದು ಎಂದು ಅವರು ನುಡಿದಿದ್ದಾರೆ.

ನಾವು ಹಿಂದೆ ಏನೇನು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೆವು ಎನ್ನುವ ವಿವರ ನಮ್ಮ ಬಳಿ ಇದೆ. ಆಗಿನ ಭೇಟಿಯಲ್ಲಿ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಕೂಡ ಇದ್ದರು. ಕೈಗಾರಿಕಾ ಸಚಿವನಾಗಿ ನಾನು ಅವರ ಬಳಿ ಹೋಗಿದ್ದೆ. ಇದರಲ್ಲಿ ನನ್ನದು ಅನ್ನುವ ಸ್ವಾರ್ಥವೇನೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಕ್ಷದಲ್ಲಿ ಶಿಸ್ತು ಇರಬೇಕು

ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಪಕ್ಷದ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಮಾತನಾಡಬಾರದು ಎನ್ನುವ ಅರ್ಥದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ ಸಮರ್ಥಿಸಿಕೊಂಡರು.

ಖರ್ಗೆಯವರು ನಮ್ಮ ವಯಸ್ಸಿಗಿಂತ ಹೆಚ್ಚು ಕಾಲ ರಾಜಕಾರಣ ಮಾಡಿರುವ ಹಿರಿಯರು. ಪಕ್ಷದಲ್ಲಿ ಶಿಸ್ತು ಇರಬೇಕು ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಯಾರಿಗಾದರೂ ಸಮಸ್ಯೆ ಇದ್ದರೆ ಪಕ್ಷದ ವ್ಯವಸ್ಥೆಯೊಳಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮುಂತಾದವರ ಜತೆ ಚರ್ಚಿಸಬಹುದು ಎಂದು ಎಂ ಬಿ ಪಾಟೀಲ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಈಗ 139 ಶಾಸಕರಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿದೆ. ನಮ್ಮಲ್ಲಿ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೀಗಿರುವಾಗ ಎಂ ಬಿ ಪಾಟೀಲ, ಪರಮೇಶ್ವರ ಮತ್ತು ಸತೀಶ ಜಾರಕಿಹೊಳಿ ಅವರದೇನೂ ನಡೆಯುವುದಿಲ್ಲ.

ಇನ್ನೊಂದೆಡೆಯಲ್ಲಿ, ಬಿಜೆಪಿಯಲ್ಲಿ ಯತ್ನಾಳ, ರಮೇಶ ಜಾರಕಿಹೊಳಿ, ವಿಜಯೇಂದ್ರ ಅವರೆಲ್ಲ ಪರಸ್ಪರ ಏಕವಚನದಲ್ಲಿ ಜಗಳವಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಡೆಯಿಂದ ಸದ್ಯದಲ್ಲೇ 25 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಅವರೆಲ್ಲ ಅಲ್ಲಿ ಬೇಸತ್ತಿದ್ದು, ಬೇಷರತ್ತಾಗಿ ನಮ್ಮೊಂದಿಗೆ ಬರಲಿದ್ದಾರೆ ಎಂದು ಪುನರುಚ್ಚರಿಸಿದರು.

ಎರಡನೇ ವಿಮಾನ ನಿಲ್ದಾಣ

ಬೆಂಗಳೂರಿಗೆ ಎರಡನೇ‌ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳಗಳ ಆಯ್ಕೆ‌ ನಡೆದಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಂ.ಬಿ.ಪಾಟೀಲ ತಿಳಿಸಿದರು.