ನ್ಯೂಸ್

ಕುಲಭೂಷಣ್ ಜಾಧವ್​ಗೆ ಮೇಲ್ಮನವಿ ಸಲ್ಲಿಕೆ ಹಕ್ಕು ಇಲ್ಲ

ನವದೆಹಲಿ: ಭಾರತದ ಬೇಹುಗಾರ ಎಂಬ ಆರೋಪದಲ್ಲಿ ಪಾಕಿಸ್ತಾನದ ಕಾರಾಗೃಹದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್​ಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) 2019ರಲ್ಲಿ ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಸಿಗಲಿಲ್ಲ. ಈ ತೀರ್ಪು ಕೇವಲ ಕಾನ್ಸುಲರ್ ಪ್ರವೇಶದ ವಿಷಯ ಒಳಗೊಂಡಿತ್ತು ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

ಭಾರತದ ಪರವಾಗಿ 2019ರ ಜೂನ್​ನಲ್ಲಿ ತೀರ್ಪು ನೀಡಿದ ಐಸಿಜೆ, ಜಾಧವ್​ಗೆ ಕಾನ್ಸುಲರ್ ಪ್ರವೇಶದ ಹಕ್ಕನ್ನು ದೖಢಪಡಿಸಿತ್ತು ಹಾಗೂ ಪಾಕಿಸ್ತಾನ ಅವರ ಶಿಕ್ಷೆ ಮತ್ತು ಮರಣದಂಡನೆಯನ್ನು ಪರಿಶೀಲಿಸಿ ಪುನರ್ ವಿಚಾರಣೆ ಮಾಡಬೇಕೆಂದು ಸೂಚಿಸಿತ್ತು.

ಪಾಕಿಸ್ತಾನ ರಕ್ಷಣಾ ಸಚಿವಾಲಯದ ವಕೀಲ ಖ್ವಾಜಾ ಹರೀಸ್ ಅಹ್ಮದ್, ಬುಧವಾರ ಪಾಕ್ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದ ಮುಂದೆ ಜಾಧವ್ ಪ್ರಕರಣ ಉಲ್ಲೇಖಿಸಿದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್​ರ 2023ರ ಮೇನಲ್ಲಿನ ಬಂಧನದ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಸೇನಾ ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದ ಪಾಕ್ ನಾಗರಿಕರ ವಿರುದ್ಧದ ವಿಚಾರಣೆ ಸಂದರ್ಭ ಈ ವಿಷಯ ಪ್ರಸ್ತಾಪಿಸಿದರು. ಜಾಧವ್​ಗೆ ಲಭ್ಯವಿರುವ ಮೇಲ್ಮನವಿ ಹಕ್ಕನ್ನು 2023ರ ಮೇ ತಿಂಗಳ ಗಲಭೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪಾಕಿಸ್ತಾನದ ನಾಗರಿಕರಿಗೆ ನೀಡಲಾಗಿಲ್ಲ ಎಂದರು. ಬಲೂಚಿಸ್ತಾನದಲ್ಲಿ ಬೇಹುಗಾರಿಕೆ-ಭಯೋತ್ಪಾದನೆ ಆರೋಪದ ಮೇಲೆ ಜಾಧವ್​ರನ್ನು 2016ರಲ್ಲಿ ಬಂಧಿಸಲಾಗಿದೆ.