ಕುಕನೂರು: ಕರ್ತವ್ಯ ನಿಷ್ಠೆ, ಧೈರ್ಯ, ಪ್ರಾಮಾಣಿಕ ಸೇವೆಗೆ ಗೃಹರಕ್ಷಕ ದಳದ ಸೀನಿಯರ್ ಪ್ಲಟೂನ ಕಮಾಂಡರ್ ಆಗಿರುವ ದ್ಯಾಂಪುರ ಗ್ರಾಮದ ವೀರಣ್ಣ ಬಡಿಗೇರಗೆ ರಾಷ್ಟ್ರಪತಿ ಸೇವಾ ಪದಕ ಒಲಿದಿದ್ದು, ಇತ್ತೀಚೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಪುರಸ್ಕಾರ ಪ್ರದಾನ ಮಾಡಿದ್ದಾರೆ.
ಕರೊನಾ ಪೂರ್ವ 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ವೀರಣ್ಣ ಬಡಿಗೇರ ಸೇವೆಗೆ ರಾಷ್ಟ್ರಪತಿಗಳು ವಿಶಿಷ್ಟ ಸೇವಾ ಪದಕ ಘೋಷಣೆ ಮಾಡಿದ್ದರು. ಕರೊನಾ ಕಾರಣ ಪ್ರಶಸ್ತಿ ಪ್ರದಾನ ವಿಳಂಬವಾಗಿತ್ತು. ನ.7ರಂದು ರಾಜ್ಯಪಾಲರು ಪದಕ ನೀಡಿ ಗೌರವಿಸಿದ್ದಾರೆ.
ವೀರಣ್ಣ ಎಸ್ಸೆಸ್ಸೆಲ್ಸಿ, ಕಾರ್ಪೆಂಟರ್ ಎಐಟಿ ವ್ಯಾಸಂಗ ಮಾಡಿದ್ದು, ಗೃಹರಕ್ಷಕದಳ ಸಂಸ್ಥೆಯಲ್ಲಿ ಸ್ವಯಂ ಸೇವಕ ಸದಸ್ಯರಾಗಿ ಸೇರಿದ್ದರು. ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚುನಾವಣೆ, ಜಾತ್ರೆಗಳ ಬಂದೋಬಸ್ತ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಗೃಹರಕ್ಷಕದಳ ಮತ್ತು ಪೌರರಕ್ಷಣಾ ಅಕಾಡೆಮಿಯಿಂದ ವಿವಿಧ ತರಬೇತಿ ಪಡೆದಿದ್ದಾರೆ. ಅಲ್ಲದೇ 1998ರ ಮಾರ್ಚ್‌ನಲ್ಲಿ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಧರ್ಮಾವರಂ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವಾಗ ಬೀಳುತ್ತಿದ್ದ ವ್ಯಕ್ತಿಯನ್ನು ತಕ್ಷಣ ಬೋಗಿಯೊಳಗೆ ಎಳೆದುಕೊಂಡು ಜೀವ ರಕ್ಷಿಸಿದ್ದರು. ಕರ್ತವ್ಯದಲ್ಲಿ ಸರಗಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಕನೂರಿನ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ 2009ರ ಫೆಬ್ರವರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದಾಗ ಧೈರ್ಯದಿಂದ ಮುನ್ನುಗ್ಗಿ ಫ್ಯೂಸ್ ತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಕರೊನಾ ಸಮಯದಲ್ಲಿ ಗೃಹರಕ್ಷದಳ ಸಿಬ್ಬಂದಿ ವೇತನ ಇಲ್ಲದೆ ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕಿದಾಗ ಅವರ ಮನವೊಲಿಸಿದ್ದರು. ಅಲ್ಲದೆ ದಾನಿಗಳು ನೀಡುವ ಆಹಾರ ಧಾನ್ಯ ಕಿಟ್‌ಗಳನ್ನು ಗೃಹರಕ್ಷಕದಳ ಸಿಬ್ಬಂದಿಗೂ ತಲುಪುವಂತೆ ಮಾಡಿದ್ದರು. ಹೀಗಾಗಿ ಇವರ ನಿಸ್ವಾರ್ಥ ಸೇವೆ, ಧೈರ್ಯ ಮೆಚ್ಚಿ ರಾಷ್ಟ್ರಪತಿ ಪದಕ ಅರಸಿ ಬಂದಿದೆ.
ವೀರಣ್ಣ ಕುಲಕಸುಬು ಬಡಗಿತನ. ತಂದೆ ಕಾಳಪ್ಪ ಬಡಿಗೇರರಿಂದ ಕಸುಬು ಕಲಿತಿರುವ ವೀರಣ್ಣ, ಬಿಡುವಿನ ವೇಳೆ ಸಹೋದರ ದೇವಪ್ಪ ಬಡಿಗೇರ ಜತೆ ಸೇರಿ ವಿವಿಧ ಕರಕುಶಲ ಕೆಲಸ ನಿರ್ವಹಿಸುತ್ತಾರೆ.
ಬಡತನದಿಂದ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಗೃಹರಕ್ಷಕದಳ ಸೇರಿ ಈಗ ಸೀನಿಯರ್ ಪ್ಲಟೂನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಧೈರ್ಯ, ಪ್ರಾಮಾಣಿಕ ಸೇವೆಗೆ ರಾಷ್ಟ್ರಪತಿ ಪದಕ ಪ್ರಶಸ್ತಿ ಲಭಿಸಿದೆ. ಇದರಿಂದ ಜವಾಬ್ದಾರಿಯೂ ಹೆಚ್ಚಿದೆ.| ವೀರಣ್ಣ ಬಡಿಗೇರ ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕೃತ