ನ್ಯೂಸ್

ಕೇಂದ್ರ ಸಚಿವ ಬಂಡಿ ಸಂಜಯ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಕೆಟಿಆರ್| KTR

KTR: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ವಿರುದ್ಧ ಸೋಮವಾರ(ಸೆ. 15) ತೆಲಂಗಾಣ ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್(ಕೆಟಿಆರ್) 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣದಲ್ಲಿ ಬಿಆರ್​ಎಸ್​ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಿ ಸಂಜಯ್ ಹೇಳಿಕೆ ನೀಡಿದ್ದರು. ಬಿಆರ್​​ಎಸ್​ ಸರ್ಕಾರದಲ್ಲಿ ಸಚಿವರಾಗಿದ್ದ ಕೆಟಿಆರ್ ಹಲವು ಶಾಸಕರು, ಅವರ ಕುಟುಂಬಸ್ಥರ, ನಟಿಯರ ಫೋನ್ ಟ್ಯಾಪಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಬಂಡಿ ಸಂಜಯ್ ಆರೋಪಕ್ಕೆ ಸಂಬಂಧಿಸಿ ಆಗಸ್ಟ್​ನಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದೀರಿ, ನಿಮ್ಮ ವಿರುದ್ಧ ಯಾಕೆ ಕಾನೂನು ಕ್ರಮ ಜರುಗಿಸಬಾರದು, ಆರೋಪಕ್ಕೆ ಸರಿಯಾದ ಸಾಕ್ಷ್ಯ ನೀಡಿ, ಇಲ್ಲ ನಿಮ್ಮ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸುವೆ.ಈ ಬಗ್ಗೆ ಉತ್ತರ ನೀಡುವಂತೆ ಕೋರಿ ಕೆಟಿಆರ್ ನೋಟಿಸ್ ಕೊಟ್ಟಿದ್ದರು. ಆದರೆ ಸಂಜಯ್ ನೋಟಿಸ್​ಗೆ ಯಾವುದೇ ಉತ್ತರ ನೀಡಿರಲಿಲ್ಲ.

ಈ ಹಿನ್ನೆಲೆ ಹೈದರಾಬಾದ್​ನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕೆಟಿಆರ್​ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ನ್ಯಾಯಾಲಯದ ನಿಗದಿಪಡಿಸಿದೆ.

ಕೆಟಿಆರ್​ ದೂರಿನಲ್ಲಿನೇದೆ?

2025 ಆಗಸ್ಟ್ 8ರಂದು ಕೇಂದ್ರ ಸಚಿವ ಬಂಡಿ ಸಂಜಯ್ ನನ್ನ ವಿರುದ್ಧ ಸುಳ್ಳು ಆರೋಪ, ಅಶ್ಲೀಲ ಕಮೆಂಟ್​ಗಳನ್ನು ಮಾಡಿದ್ದಾರೆ. ನನ್ನ ವಿರುದ್ದ ಎಸ್​ಐಬಿ ದುರುಪಯೋಗ, ಫೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ. ಈ ಸಂಬಂಧ ವಿವಿಧ ಸುದ್ದಿ ಮಾಧ್ಯಮಗಳಲ್ಲಿ, ಡಿಜಿಟಲ್ ಮೀಡಿಯಾಗಳಲ್ಲಿ, ವ್ಯಾಪಕವಾಗಿ ಪ್ರಸಾರವಾಗಿದೆ.

ಬಂಡಿ ಸಂಜಯ್ ಮಾಡಿದ ಆರೋಪಗಳು ಕೇವಲ ಊಹಾಪೋಹ,  ಇದು ಕೇವಲ ನನ್ನ ಮಾನಹಾನಿ ಮಾಡಿಲ್ಲ, ನನ್ನ ವ್ಯಕ್ತಿತ್ವವನ್ನೇ ನಾಶ ಮಾಡುವ ಉದ್ದೇಶನ್ನು ಹೊಂದಿದೆ. ಈ ಆರೋಪಕ್ಕೆ ಪರಿಹಾರವಾಗಿ ಅವರು 10 ಕೋಟಿ ಮಾನನಷ್ಟ ಪರಿಹಾರ ಕೊಡಬೇಕು. ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಸುದ್ದಿವಾಹಿನಿಗಳು, ಡಿಜಿಟಲ್ ಮೀಡಿಯಾದಲ್ಲಿ ಪ್ರಸಾರವಾಗಿದ್ದನ್ನು ತೆಗೆದು ಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. (ಏಜೆನ್ಸೀಸ್)