ನ್ಯೂಸ್

ಕೆಎಸ್‌ಆರ್‌ಟಿಸಿ: ಅಪಘಾತದಲ್ಲಿ ಕಾಲು ಕಳೆದುಕೊಂಡ ಸಿಬ್ಬಂದಿ 25 ಲಕ್ಷ ಪರಿಹಾರ|KSRTC

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇದೇ ಮೊದಲ ಬಾರಿಗೆ ಅಪಘಾತದಲ್ಲಿ ಗಾಯಗೊಂಡು ಕಾಲು ಕಳೆದು ಕೊಂಡ ಸಿಬ್ಬಂದಿಗೆ 25 ಲಕ್ಷ ರೂ. ಪರಿಹಾರ(KSRTC: Rs 25 lakh compensation to staff who lost leg in accident) ವಿತರಿಸಲಾಯಿತು.

ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ. ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ 10 ಲಕ್ಷ ರೂ.ಗಳಂತೆ 3.10 ಕೋಟಿ ಪರಿಹಾರ ವಿತರಣೆ ಮಾಡಲಾಯಿತು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ(Ramalinga Reddy) ಪರಿಹಾರ ವಿತರಣೆ ಮಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಚೆಕ್ ವಿತರಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ. ಆದರೆ, ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ಮೃತ ಸಿಬ್ಬಂದಿಗಳ ಕುಟುಂಬವನ್ನು ನೋಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೃತರ ಅವಲಂಬಿತರಿಗೆ ಈಗಾಗಲೇ ನಾಲ್ಕು ನಿಗಮಗಳಲ್ಲಿ ಅನುಕಂಪದ ಆಧಾರದ ಮೇಲೆ 1000 ನೌಕರಿ ನೀಡಿರುವುದಾಗಿ ತಿಳಿಸಿದರು.

ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು, ರಾಜ್ಯಾದ್ಯಂತ 300 ಕ್ಕೂ ಅಧಿಕ ಆಸ್ಪತ್ರೆಗಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಲಾಗಿದೆ. ಈವರೆಗೂ 56,000 ಕ್ಕೂ ಹೆಚ್ಚು ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದರು.

ಇದೇ ಪ್ರಪ್ರಥಮ ಬಾರಿಗೆ ನಿಗಮದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಒಳಪಟ್ಟು, ಬಲಗಾಲಿನ ಮಂಡಿಯ ಕೆಳಗೆ ಕಾಲನ್ನು ಕಳೆದುಕೊಂಡ ಅರಕಲಗೂಡು ಘಟಕದ ಚಾಲಕ ಕಂ ನಿರ್ವಾಹಕ ಸುನಿಲ್ ಕುಮಾರ್ ಬಿ.ಡಿ. ಅವರಿಗೆ ಪರಿಹಾರವಾಗಿ 25 ಲಕ್ಷ ರೂ. ವಿತರಿಸಲಾಯಿತು.

ಇದುವರೆಗೆ 24 ಜನ ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂ. ಅಪಘಾತ ವಿಮಾ ಮೊತ್ತ ವಿತರಿಸಲಾಗಿದೆ ಎಂದು ತಿಳಿಸಿದರು.

ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ವಿ.ಮಾತನಾಡಿ, ಪರಿಹಾರ ರೂಪದಲ್ಲಿ ಸಿಕ್ಕಿರುವ ಹಣವನ್ನು ಸದುಪಯೋಗಪಡಿಸಿ ಕೊಳ್ಳಿ ಯಾರನ್ನು ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್, ನಿರ್ದೇಶಕಿ ಡಾ.ನಂದಿನಿದೇವಿ ಮತ್ತಿತರರು ಉಪಸ್ಥಿತಿರಿದ್ದರು.