ಶಿವಮೊಗ್ಗ: ರಾಜ್ಯ ಸರ್ಕಾರದ ವಿರುದ್ಧ ಕಳೆದ ಒಂಬತ್ತು ದಿನಗಳಿಂದ ಹೋರಾಟ ಮಾಡುತ್ತಿರುವ ಸಾರಿಗೆ ನೌಕರರು ರಾಜ್ಯ ಸಮಿತಿ ಮುಖಂಡರ ಸೂಚನೆಯಂತೆ ಗುರುವಾರ ಜಿಲ್ಲೆಯಲ್ಲಿ ಮೊಂಬತ್ತಿ ಬೆಳಗಿ ಪ್ರತಿಭಟನೆ ನಡೆಸಿದರು. ನಗರದ ಗೋಪಿ ವೃತ್ತದಲ್ಲಿ ಮೊಂಬತ್ತಿ ಬೆಳಗಿ ಪ್ರತಿಭಟನೆ ನಡೆಸಿದ ನೌಕರರು, ಒಂಬತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿದೆ. ನೌಕರರ ಮುಷ್ಕರವನ್ನು ಹತ್ತಿಕ್ಕಲು, ವರ್ಗಾವಣೆ, ಅಮಾನತು ಶಿಕ್ಷೆ ನೀಡುತ್ತಿದೆ ಎಂದು ಕಿಡಿ ಕಾರಿದರು.
ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಚುನಾವಣಾ ಸಂದರ್ಭದಲ್ಲಿ ಸಾರಿಗೆ ನೌಕರರಿಗೆ ನೀಡಿದ ಭರವಸೆಗಳನ್ನು ಸಿಎಂ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನೌಕರರ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಮುಖಂಡರು ಕೂಡ ಸಾಥ್ ನೀಡಿದರು.
ತಟ್ಟೆ-ಲೋಟ ಬಡಿಯುವುದು, ಭಿಕ್ಷೆ ಎತ್ತಿದರೂ ಪ್ರಯೋಜನ ಆಗಿಲ್ಲ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಭವಿಷ್ಯದಲ್ಲಿ ನಡೆಯುವ ದೊಡ್ಡ ಹುನ್ನಾರವನ್ನು ಮಟ್ಟಹಾಕಬೇಕಿದೆ ಎಂದು ಕೆಎಸ್‌ಆರ್‌ಟಿಸಿ ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಸಂತೋಷ್‌ಕುಮಾರ್ ಮನವಿ ಮಾಡಿದರು. ಒಕ್ಕೂಟದ ತ್ಯಾವರ ನಾಯ್ಕ, ಬಸವರಾಜ್, ಗಣೇಶ್, ಶಿವಕುಮಾರ್, ದೂದ್ಯನಾಯ್ಕ ಮುಂತಾದವರಿದ್ದರು.