ಶಿವಮೊಗ್ಗ: ವೇತನ ಪರಿಷ್ಕರಣೆ ಬಾಕಿ ಹಣ ಬಿಡುಗಡೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆ.5ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೆಎಸ್‌ಆರ್‌ಟಿಸಿ ನಿಗಮಗಳು ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಎಂ.ಮಹಾದೇವ ಹೇಳಿದರು.
ನಾಲ್ಕು ಸಾರಿಗೆ ನಿಗಮ ಮತ್ತು ವಿವಿಧ ರಸೆ ್ತಸಾರಿಗೆ ನೌಕರರ, ಸಂಘಟನೆಗಳ ಆಶ್ರಯದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆ.4ರ ಗಡುವು ನೀಡಲಾಗಿದೆ. ರಾಜ್ಯ ಸರ್ಕಾರ ಮಾತುಕತೆಗೆ ಕರೆದು ಸಮಸ್ಯೆಗಳನ್ನು ಬಗೆಹರಿಸಿದರೆ, ಮುಷ್ಕರ ಕೈಬಿಡಲಾಗುವುದು. ಮಾತುಕತೆಗೆ ಕರೆಯದಿದ್ದರೆ ಆ.5ರ ಸಂಜೆ 6 ಗಂಟೆಯಿಂದ ಸಾರಿಗೆ ನಿಗಮದ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಷ್ಕರ ಮಾಡಿದರೆ ಎಸ್ಮಾ ಜಾರಿ ಮಾಡುತ್ತೇವೆ ಎಂದು ಸರ್ಕಾರ ಬೆದರಿಸುತ್ತಿದೆ. ಆದರೆ ನಾವು ಈ ಬೆದರಿಕೆಗೆ ಜಗ್ಗುವುದಿಲ್ಲ. ರಾಜ್ಯದಲ್ಲಿ 1.50 ಲಕ್ಷ ನೌಕರರಿದ್ದೇವೆ. ಸೌಹಾರ್ದಯುತವಾಗಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಹಿಂದೆ ಮುಷ್ಕರ ಮಾಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಶಕ್ತಿ ಯೋಜನೆಯನ್ನು ನಾವು ಯಶಸ್ವಿಯಾಗಿಸಿದ್ದೇವೆ. ಆ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದಿದ್ದೇವೆ. ಉತ್ತಮ ಸೇವೆ ಸಲ್ಲಿಸುವಲ್ಲಿ ಚಾಲಕರು, ನಿರ್ವಾಹಕರು, ಅಧಿಕಾರಿಗಳು ಶ್ರಮಿಸಿದ್ದಾರೆ. ನಮ್ಮ ಪರಿಶ್ರಮವನ್ನು ರಾಜ್ಯ ಸರ್ಕಾರ ಗುರುತಿಸಿಲ್ಲ ಎಂದು ದೂರಿದರು.
2020 ಜ. 1ರಿಂದ ಶೇ. 15 ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಪಾವತಿಸಬೇಕು. 2023ರ ಡಿ. 31ರಲ್ಲಿದ್ದ ನೌಕರರ ಮೂಲ ವೇತನಕ್ಕೆ ಶೇ. 31ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ, 2024ರ ಜ. 1ರಿಂದ ಶೇ. 25ರಷ್ಟು ವೇತನ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ಸಿಐಟಿಯು ಶಿವಮೊಗ್ಗ ವಿಭಾಗದ ಅಧ್ಯಕ್ಷ ಚಿನ್ನಪ್ಪ, ಹೊನ್ನಾಳಿ ಘಟಕದ ಅಧ್ಯಕ್ಷ ಎಚ್.ಲೋಕೇಶ್, ಪ್ರಮುಖರಾದ ಕರಿಬಸಪ್ಪ, ಯೋಗೇಶ್, ಮಂಜಪ್ಪ, ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.