ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಂಚಾರ ನಿಷೇಧವಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಅನ್ನು, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಪೊಲೀಸರು ತಡೆಹಿಡಿದಿದ್ದಾರೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿಷೇಧವಿರುವ ಕಾರಣ ಬಸ್ಸನ್ನು ನಿಲ್ಲಿಸಿದ ಕೊಕ್ಕಡ ಪೊಲೀಸರು, ಬೆಂಗಳೂರಿಗೇ ವಾಪಸ್ ಕಳುಹಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅನ್ಲಾಕ್ ಪ್ರಕ್ರಿಯೆಯ ಅನುಸಾರವಾಗಿ ಇಂದಿನಿಂದ ಮೈಸೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯವನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಬಸ್ ಆರಂಭಿಸುವ ಮುಂಚೆ ಜಿಲ್ಲಾ ಮಟ್ಟದಲ್ಲಿ ವಿಧಿಸಲಾಗಿರುವ ನಿಷೇಧದ ಬಗ್ಗೆ ಗಮನ ನೀಡಲಾಗಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.