ನ್ಯೂಸ್

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಪತಿ ಸಾವು, ಪತ್ನಿಗೆ ಗಾಯ


ಬೆಂಗಳೂರು: ಅತಿವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟು, ಪತ್ನಿ ಗಾಯಗೊಂಡಿರುವ ಪ್ರಕರಣ ಶಿವಾಜಿನಗರದಲ್ಲಿ ನಡೆದಿದೆ.
ಈಜಿಪುರ ನಿವಾಸಿ ಲೂಕಾಸ್(೬೪) ಮೃತ ಸವಾರ. ಹಿಂಬದಿ ಕುಳಿತ್ತಿದ್ದ ಪತ್ನಿ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಮುಂಜಾನೆ ೫.೪೫ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೂಕಾಸ್ ದಂಪತಿ ಶಿವಾಜಿನಗರದ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಕಬ್ಬನ್ ರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಯಿಂದ ಮೈನ್ ಗಾರ್ಡ್ ಜಂಕ್ಷನ್‌ಗೆ ಬಂದು ಸಫೀನಾ ಪ್ಲಾಜಾ ಕಡೆಗೆ ತೆರಳಲು ದ್ವಿಚಕ್ರ ವಾಹನ ತಿರುಗಿಸಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಮೆಜೆಸ್ಟಿಕ್ ಕಡೆಯಿಂದ ಕಬ್ಬನ್ ರಸ್ತೆಯಲ್ಲಿ ಎದುರಿನಿಂದ ಬರತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದಂಪತಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರ ಲೂಕಾಸ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಲೂಕಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಬಸ್ ಅತಿವೇಗ ಹಾಗೂ ನಿರ್ಲಕ್ಷೃದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದಾರೆ.