ಬೆಂಗಳೂರು: ಸಾಮಾನ್ಯವಾಗಿ ಅಂಚೆ ಮತ್ತು ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೂ ಮುನ್ನ ಕಾಂಟಾಕ್ಟ್ ಕ್ಲಾಸ್ಗಳನ್ನು (ಸಂಪರ್ಕ ತರಗತಿ) ನಡೆಸಲಾಗುತ್ತದೆ. ದೂರ ಶಿಕ್ಷಣ ನೀಡುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಈ ರೀತಿ ತರಗತಿಗಳನ್ನು ನಡೆಸುತ್ತವೆ.
ಆದರೆ, ಇದೇ ಮೊದಲ ಬಾರಿಗೆ ಇಂಥ ತರಗತಿಗಳನ್ನು ಆನ್ಲೈನ್ ಮೂಲಕ ನಡೆಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ನಿರ್ಧರಿಸಿದೆ. ಕೋವಿಡ್-19 ಕಾಯಿಲೆ ಹರಡುವಿಕೆಯನ್ನು ತಡೆಗಟ್ಟಲು ಈ ಬಾರಿ ಸಂಪರ್ಕ ತರಗತಿಗಳನ್ನು ಆನ್ಲೈನ್ ಮೂಲಕ ನಡೆಸಲಾಗುತ್ತಿದೆ ಎಂದು ವಿವಿ ತಿಳಿಸಿದೆ.
2019-20ನೇ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ ಪ್ರವೇಶ ಪಡೆದಿರುವ ಪ್ರಥಮ ವರ್ಷದ, 2018-19ರಲ್ಲಿ ಪ್ರವೇಶ ಪಡೆದಿರುವ ದ್ವಿತೀಯ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಆಈಗಾಗಲೇ ತರಗತಿಗಲು ಆರಂಭವಾಗಿದ್ದು, ಜೂನ್ 5ರವರೆಗೆ ನಡೆಯಲಿವೆ.
ಆನ್ಲೈನ್ ತರಗತಿಗಳ ವೇಳಾಪಟ್ಟಿಯನ್ನು www.ksoumysuru.ac.in ವೆಬ್ಸೈಟ್ ಹಾಗೂ KSOU Students APP ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆ್ಯಪ್ ಹಾಗೂ ವೆಬ್ಸೈಟ್ನಲ್ಲಿ ದೊರೆಯುವ ಲಿಂಕ್ ಮುಖಾಂತರ ಲೈವ್ ತರಗತಿಗಳಿಗೆ ಹಾಜರಾಗಬಹುದು ಎಂದು ಕೆಎಸ್ಒಯು ಪ್ರಾದೇಶಿಕ ನಿರ್ದೇಶಕ ಡಾ. ಆರ್. ಲೋಕೇಶ್ ತಿಳಿಸಿದ್ದಾರೆ.