| ಕೆ.ಪಿ.ಸಾಗರ್ ರಾಜು ಮೈಸೂರು
ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎನ್ನುತ್ತಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಇದೀಗ ವಿದ್ಯಾರ್ಥಿಗಳ ಪಾಲಿಗೆ ದುಬಾರಿಯಾಗಿದೆ. 2021-22ನೇ ಸಾಲಿನ (ಜುಲೈ ಆವೃತ್ತಿ) ಪದವಿ, ಸ್ನಾತಕೋತ್ತರ, ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಬಡವಿದ್ಯಾರ್ಥಿಗಳಿಗೆ ಬರೆ ಎಳೆದಿದೆ.
ಕಳೆದ ವರ್ಷ 6,200 ರೂ. ಇದ್ದ ಪ್ರಥಮ ಎಂಎ ಪ್ರವೇಶ ಶುಲ್ಕವನ್ನು ಈ ಬಾರಿ 9,200 ರೂ.ಗೆ, 9,900 ರೂ. ಇದ್ದ ಪ್ರಥಮ ಎಂಎ (ಜೆಎಂಸಿ) ಶುಲ್ಕವನ್ನು 14,000 ರೂ.ಗೆ, ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎ ಶುಲ್ಕದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಅಂತಿಮ ವರ್ಷದ ಎಂಎ, ಎಂಕಾಂ ಪ್ರವೇಶ ಶುಲ್ಕವನ್ನು ಶೇ.45ರಿಂದ 50 ಏರಿಕೆ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಅಂತಿಮ ವರ್ಷದ ಎಂಎ, ಎಂಕಾಂ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ಇದ್ದ ಪ್ರವೇಶ ಶುಲ್ಕವನ್ನು ಈ ಸಾಲಿನಲ್ಲಿ ಏಕಾಏಕಿ ಎಂಎಗೆ 9,500 ರೂ. (ಶೇ.45) ಹಾಗೂ ಎಂಕಾಂಗೆ 11,050 ರೂ. (ಶೇ.51) ಹೆಚ್ಚಿಸಲಾಗಿದೆ. ಜೆಎಂಸಿಗೆ 9,500 ರೂ. ಇದ್ದ ಶುಲ್ಕವನ್ನು 14,300 ರೂ.ಗೆ ಏರಿಸಿ, ನವೆಂಬರ್ 20ರೊಳಗೆ ಆನ್ಲೈನ್ ಮೂಲಕ ಪಾವತಿಸಲು ಸೂಚಿಸಲಾಗಿದೆ. ಇದಲ್ಲದೆ, ಯಾವುದಾದರೂ ವಿಷಯವನ್ನು ತಮ್ಮ ಸ್ನಾತಕ ಪದವಿಯಲ್ಲಿ ವ್ಯಾಸಂಗ ಮಾಡದೆ (ಪತ್ರಿಕೋದ್ಯಮ ಹೊರತುಪಡಿಸಿ) ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯಬೇಕಾದರೆ 1,000 ರೂ. ಹೆಚ್ಚಿಗೆ ಪಾವತಿಸಬೇಕಿದೆ.
ವಿದ್ಯಾರ್ಥಿಗಳಿಂದ ಆಕ್ರೋಶ: ಪೆಟ್ರೋಲ್, ಡೀಸೆಲ್, ಗ್ಯಾಸ್, ಅಗತ್ಯವಸ್ತುಗಳ ಬೆಲೆ ಏರಿಕೆಯಂತೆ ಮುಕ್ತ ವಿವಿಯು ತನ್ನ ಪ್ರವೇಶ ಶುಲ್ಕವನ್ನು ಏರಿಸುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರೊನಾ ಕಾಲಘಟ್ಟದಲ್ಲಿ ಯುವಜನತೆ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಶುಲ್ಕ ಹೆಚ್ಚಳ ಸರಿಯಲ್ಲ. ಸಾಮಾನ್ಯವಾಗಿ ಪ್ರಥಮ ವರ್ಷದ ಶುಲ್ಕಕ್ಕಿಂತ ದ್ವಿತೀಯ ವರ್ಷದ ಶುಲ್ಕ ಕಡಿಮೆ ಇರಬೇಕು. ಆದರಿಲ್ಲಿ ಎಲ್ಲವೂ ಉಲ್ಟಾ ಎಂದು ದೂರಿದ್ದಾರೆ.
ಕೆಲವರಿಗಷ್ಟೇ ರಿಯಾಯಿತಿ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಪಾವತಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ ಹಾಗೂ ಡಿಫೆನ್ಸ್ ಹಾಗೂ ಎಕ್ಸ್ ಸರ್ವೀಸ್ವುನ್ಗಳಿಗೆ ಬೋಧನಾ ಶುಲ್ಕದಲ್ಲಿ ಮಾತ್ರ ಶೇ.15 ರಿಯಾಯಿತಿ ನೀಡಲಾಗಿದೆ. ತೃತೀಯ ಲಿಂಗಿಗಳು ಮತ್ತು ಕೋವಿಡ್-19ರಿಂದ ತಂದೆ-ತಾಯಿ ಕಳೆದುಕೊಂಡವರಿಗೆ ಪೂರ್ಣಶುಲ್ಕ ವಿನಾಯಿತಿ ಸಿಗಲಿದೆ.
7-8 ವರ್ಷಗಳಿಂದ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಹೀಗಾಗಿ ವಿವಿಯ ಕೆಲ ಖರ್ಚು- ವೆಚ್ಚಕ್ಕೆ ಅನುಗುಣವಾಗಿ ಪ್ರಥಮ ವರ್ಷದವರಿಗೆ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಿಸಿರುವ ಬಗ್ಗೆ ಪರಿಶೀಲನೆ ನಡೆಸಿ, ಬದಲಾವಣೆ ಮಾಡಲು ಕ್ರಮ ವಹಿಸಲಾಗುವುದು. | ಡಾ. ಎಸ್.ವಿದ್ಯಾಶಂಕರ್ ಕುಲಪತಿ, ಕೆಎಸ್ಒಯು
ಪರೀಕ್ಷೆ ನಡೆದಿಲ್ಲ, ಫಲಿತಾಂಶ ಪ್ರಕಟಿಸಿಲ್ಲ: ಪರೀಕ್ಷಾ ಶುಲ್ಕ ಕಟ್ಟಿಸಿಕೊಂಡಿರುವ ಕೆಎಸ್ಒಯು ಕೋವಿಡ್ ಕಾರಣದಿಂದ ಪ್ರಥಮ, ದ್ವಿತೀಯ ಬಿಎ, ಬಿಕಾಂ, ಪ್ರಥಮ ಎಂಎ, ಎಂಕಾಂ ಪರೀಕ್ಷೆ ನಡೆಸದೆ ಆಂತರಿಕ ನಿಬಂಧನೆಗಳ ಅನ್ವಯ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು ಎಂದು ತಿಳಿಸಿತ್ತು. ಆದರಫಲಿತಾಂಶಕ್ಕೆ ಕಾಯದೆ ಮುಂದಿನ ವರ್ಷಕ್ಕೆ ಪ್ರವೇಶ ಪಡೆಯುವಂತೆ ತಿಳಿಸಲಾಗಿದೆ. ಆದರೆ ಪರೀಕ್ಷೆಯೂ ನಡೆದಿಲ್ಲ, ಫಲಿತಾಂಶವೂ ಪ್ರಕಟಗೊಂಡಿಲ್ಲ, ಈಗ ಹೆಚ್ಚಿನ ಶುಲ್ಕ ವಿಧಿಸಿ ಪ್ರವೇಶಾತಿ ಪಡೆಯುವಂತೆ ತಿಳಿಸಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲದ ಜತೆ ಆತಂಕ ತಂದಿದೆ.
ಪ್ರಥಮ ವರ್ಷದಿಂದ ಅಂತಿಮ ವರ್ಷಕ್ಕೆ ಶುಲ್ಕ ಇಳಿಕೆಯಾಗಬೇಕು. ಆದರಿಲ್ಲಿ, ಏರಿಕೆ ಮಾಡಲಾಗಿದೆ. ಕರೊನಾ, ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಹಿಂದಿನ ವರ್ಷ ನಿಗದಿಪಡಿಸಿದ್ದ ಶುಲ್ಕವನ್ನೇ ಪಡೆಯಬೇಕು.
| ಸಂಪತ್, ವಿಜಯ್, ಮೋಹನಕುಮಾರಿ, ಅಂತಿಮ ಎಂಎ ವಿದ್ಯಾರ್ಥಿಗಳು, ಕೆಎಸ್ಒಯು