ಶಿವಮೊಗ್ಗ: ಶ್ರೀರಾಮ ತೋರಿದ ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು ಕೆ.ಎಸ್.ಈಶ್ವರಪ್ಪ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲು ಎಂದು ಶ್ರೀರಾಮ ಕರೆದಿದ್ದ. ಅದೇ ರೀತಿ ಈಶ್ವರಪ್ಪ ಭಾರತಮಾತೆಯನ್ನು ಸರ್ವಶ್ರೇಷ್ಠವೆಂದು ಭಾವಿಸಿದ್ದಾರೆ ಎಂದರು.
ಚಿತ್ರದುರ್ಗದ ಬಸವ ಮಾದಾರ ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಈಶ್ವರಪ್ಪ ಅವರು ಪ್ರತಿವರ್ಷ ಜನ್ಮದಿನವನ್ನು ಅರ್ಥಪೂರ್ಣ, ಸಮಾಜಮುಖಿಯಾಗಿ ಆಚರಿಸಿಕೊಳ್ಳುತ್ತಾರೆ. ಎಂಟು ದಶಕಗಳ ಹೊಸ್ತಿಲಲ್ಲಿರುವ ಈಶ್ವರಪ್ಪ ವಿದ್ಯಾರ್ಥಿ ಜೀವನದಿಂದಲೇ ರಾಷ್ಟ್ರೀಯತೆ ರೂಢಿಸಿಕೊಂಡವರು. ರಾಜಕೀಯದಲ್ಲಿ ಏರುಪೇರಾದರೂ ವಿಚಾರಧಾರೆಯಿಂದ ದೂರವಾಗಲಿಲ್ಲ ಎಂದು ಹೇಳಿದರು.
ರಾಷ್ಟ್ರೀಯತೆಗೆ ಧಕ್ಕೆಯಾದಾಗ ಸೂಕ್ತವಾಗಿ ಪ್ರತಿಕ್ರಿಯಿಸುವುದು ಈಶ್ವರಪ್ಪ ಅವರ ಮನಸ್ಥಿತಿ. ಅಧಿಕಾರ ಇದ್ದಾಗ, ಇಲ್ಲದಿದ್ದಾಗ ಅವರ ನಡವಳಿಕೆ ಒಂದೇ ರೀತಿ ಎಂದು ತಿಳಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ, ಪುತ್ರ ಕೆ.ಇ.ಕಾಂತೇಶ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್ ಇತರರಿದ್ದರು.