| ಕೀರ್ತಿನಾರಾಯಣ ಸಿ. ಬೆಂಗಳೂರು
ಸಣ್ಣ ಮತ್ತು ಅತಿಸಣ್ಣ ರೈತರ ಅನುಕೂಲಕ್ಕಾಗಿ ಜಾರಿಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೂರಾರು ಕೋಟಿ ರೂ. ಅನರ್ಹರ ಪಾಲಾಗಿರುವುದು ಬೆಳಕಿಗೆ ಬಂದಿದೆ. ಅಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆ ನೌಕರರು ಶಾಮೀಲಾಗಿದ್ದು, ಅಂಥವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ.
ಕರ್ನಾಟಕದಲ್ಲಿ 2.40 ಲಕ್ಷ ಅಪಾತ್ರರ ಖಾತೆಗಳಿಗೆ ಸಹಾಯಧನ ವರ್ಗಾ ವಣೆಯಾಗಿದೆ. ಈಗಾಗಲೇ ಖಾತೆದಾರರಿಗೆ ಕೃಷಿ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು, ಅಕ್ರಮವಾಗಿ ಸ್ವೀಕರಿಸಿರುವ ಸಹಾಯಧನ ವಾಪಸ್ ಕೊಡುವಂತೆ ಸೂಚಿಸಲಾಗಿದೆ. ಪಾವತಿ ಮಾಡದಿದ್ದರೆ ಈಗ ಪಡೆಯುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. ನಂತರ 1.21 ಕೋಟಿ ರೂ. ಸರ್ಕಾರಕ್ಕೆ ಮರು ಪಾವತಿಯಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ತಮಿಳುನಾಡಲ್ಲಿ 8.5 ಲಕ್ಷ ಅನರ್ಹರ ಖಾತೆಗಳಿಗೆ ಸಹಾಯಧನ ಜಮೆಯಾಗಿದ್ದು, ಅತಿಹೆಚ್ಚು ವಂಚನೆ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ. ತಮಿಳುನಾಡಲ್ಲಿ ಬರೋಬ್ಬರಿ 163 ಕೋಟಿ ರೂ. ಮರುವಸೂಲಿ ಮಾಡಲಾಗಿದೆ. ರಾಜಸ್ಥಾನದಲ್ಲಿ 3.6 ಲಕ್ಷ ಹಾಗೂ ಗುಜರಾತ್ನಲ್ಲಿ 41.76 ಲಕ್ಷ ರೂ. ವಸೂಲಿ ಮಾಡಲಾಗಿದೆ.
ಆರ್ಟಿಐ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ 11.37 ಕೋಟಿ ರೈತರು ಫಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 58.08 ಲಕ್ಷ ಮಂದಿ ರೈತರ ಹೆಸರಿನಲ್ಲಿ ಸಹಾಯಧನ ಪಡೆಯುತ್ತಿರುವ ಅನರ್ಹರಾಗಿದ್ದಾರೆ. 58.08 ಲಕ್ಷ ಅನರ್ಹ ರೈತರಲ್ಲಿ 13.73 ಲಕ್ಷ ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದು, ಸುಳ್ಳು ಮಾಹಿತಿ ಕೊಟ್ಟು ಸಹಾಯಧನಕ್ಕೆ ನೋಂದಣಿ ಮಾಡಿಸಿದ್ದಾರೆ. ಉಳಿದವರು ರೈತರೇ ಅಲ್ಲದಿದ್ದರೂ ಕಳ್ಳದಾರಿಯಲ್ಲಿ ನೋಂದಣಿ ಮಾಡಿಸಿ ಸಹಾಯಧನ ಪಡೆದುಕೊಂಡಿದ್ದು, ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ.
ವಂಚನೆ ತಡೆಗೆ ಹೊಸ ನಿಯಮ: ಲಾಗಿನ್ ಐಡಿ ದುರ್ಬಳಕೆ ಮಾಡಿಕೊಂಡು ಅರ್ಹರಲ್ಲದವರನ್ನೂ ಸಹಾಯಧನಕ್ಕೆ ಸ್ವಯಂ ನೋಂದಣಿ ಮಾಡಿರುವುದು ಬಹುತೇಕ ಕಡೆ ದೃಢಪಟ್ಟಿದೆ. ಹೀಗಾಗಿ ಲಾಗಿನ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸರ್ಕಾರಿ ಇ ಮೇಲ್ ಐಡಿ ಹಾಗೂ ಮೊಬೈಲ್ ಎರಡರಲ್ಲೂ ಓಟಿಪಿ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇ ಮೇಲ್ ಹಾಗೂ ಮೊಬೈಲ್ ಎರಡರಲ್ಲೂ ಬರುವ ಓಟಿಪಿ ಹೊಂದಾಣಿಕೆ ನಂತರವೇ ನೋಂದಣಿ ಪ್ರಕ್ರಿಯೆ ಮುಂದುವರಿಯುತ್ತದೆ. ಕಾಲಮಿತಿಯಲ್ಲಿ ಪಾಸ್ವರ್ಡ್ ಬದಲಾವಣೆಗೂ ಸೂಚನೆ ಕೊಟ್ಟಿದೆ.
ಕೇಂದ್ರದಿಂದ 2 ಲಕ್ಷ ಕೋಟಿ ರೂ. ಪಾವತಿ: ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಕೇಂದ್ರ ಸರ್ಕಾರ 6000 ಹಾಗೂ ರಾಜ್ಯ ಸರ್ಕಾರ 4000 ಸೇರಿ ಒಟ್ಟು 10 ಸಾವಿರ ರೂ. ನೇರವಾಗಿ ಜಮೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಈವರೆಗೆ 11.37 ಕೋಟಿ ರೈತರ ಖಾತೆಗೆ ತಲಾ 6000 ರೂ.ನಂತೆ 2 ಲಕ್ಷ ಕೋಟಿ ಪಾವತಿ ಮಾಡಿದೆ.
ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ವಂಚನೆ ನಿಯಂತ್ರಣಕ್ಕೆ ಈಗಾಗಲೇ ನೋಂದಣಿ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಸಹಾಯಧನ ಪಡೆದಿರುವ ಅರ್ಹರಲ್ಲದ ರೈತರನ್ನು ಗುರುತಿಸಿ, ಅವರಿಗೆ ನೋಟಿಸ್ ಕೊಡುವ ಮುಖಾಂತರ ಹಣ ಮರು ವಸೂಲಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. | ಬಿ. ಶರತ್ ಆಯುಕ್ತರು, ಕೃಷಿ ಇಲಾಖೆ
ಚಿತ್ರದುರ್ಗ, ಬೆಳಕಿಗೆ ಬಂದಿದ್ದು ಹೇಗೆ?: ಯೋಜನೆ ದುರ್ಬಳಕೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ. ನೋಂದಣಿಗೆ ಕೊಟ್ಟಿರುವ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ಯಾವ ಹಂತದಲ್ಲಿ? ಹೇಗೆ? ವಂಚನೆ ನಡೆದಿದೆ ಎಂಬುದನ್ನು ಪರಿಶೀಲಿಸಿ, ಅರ್ಹರು, ಅನರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಎಲ್ಲ ಫಲಾನುಭವಿಗಳ ಇಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.
ಬೀದರ್ನಲ್ಲೂ ವಂಚನೆ: ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ವಂಚನೆ ನಡೆದಿದ್ದು, ಚಿತ್ರದುರ್ಗ ಹಾಗೂ ಬೀದರ್ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ 2021 ಫೆಬ್ರವರಿಯಲ್ಲೇ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಕೃಷಿ ಇಲಾಖೆ ದೂರು ದಾಖಲಿಸಿದೆ. ರುಬಿಯಾ ಖಾತುನ್ ಹೆಸರಿನಲ್ಲಿ ಖಾತೆ ತೆರೆದು ವಂಚಿಸಲಾಗಿದೆ. ನಕಲಿ ಖಾತೆಗಳ ಅನುಮಾನದ ಮೇರೆಗೆ ಈವರೆಗೆ 85 ಸಾವಿರ ಖಾತೆಗಳನ್ನು ಬ್ಲಾಕ್ ಮಾಡಿಸಲಾಗಿದೆ.
16 ಜಿಲ್ಲೆಗಳಲ್ಲಿ ಎಫ್ಐಆರ್: ಕಿಸಾನ್ ಸಮ್ಮಾನ್ ವಂಚನೆ ಸಂಬಂಧ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಗುತ್ತಿಗೆ ಸಿಬ್ಬಂದಿ ಸೇರಿ 123 ಜನರನ್ನು ಬಂಧಿಸಲಾಗಿದೆ. ವಂಚನೆಯಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ 102 ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಅತಿ ಹೆಚ್ಚು ಅನರ್ಹ ರೈತರನ್ನು ನೋಂದಣಿ ಮಾಡಿದ ಬ್ಲಾಕ್ವುಟ್ಟದ ಮೂವರು ಸಹಾಯಕ ನಿರ್ದೇಶಕರನ್ನು ಅಮಾನತುಗೊಳಿಸಿದ್ದು, 71 ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.