ನ್ಯೂಸ್

ರಂಗ ಕೊಳಲನೂದಲಾಗಿ

ಮೋಹನ್​ ಶೆಟ್ಟಿ

.ಒಮ್ಮೆ ಗೋಪಿಕಾಸ್ತ್ರೀಯರು ಹೇಳುತ್ತಾರೆ. ಭಗವಂತನ ತುಟಿಯನ್ನು ನೋಡುವುದೇ ಒಂದು ಭಾಗ್ಯ. ಅಷ್ಟು ಸುಂದರವಾದ ಕೆಂಪಾದ ತುಟಿಗಳು. ಮೋಹಕ ತುಟಿಗಳು. ಆ ತುಟಿಗಳನ್ನು ನೋಡುವುದಕ್ಕೆ ಎಷ್ಟು ಪುಣ್ಯ ಬೇಕೋ ಅಷ್ಟು ಪುಣ್ಯವನ್ನು ಮಾತ್ರ ನಾವು ಸಂಪಾದಿಸಿದ್ದೇವೆ. ಆದರೆ ಈ ಕೃಷ್ಣನ ಕೊಳಲು ಏನು ಪುಣ್ಯ ಮಾಡಿದೆ! ಕೃಷ್ಣ ಪರಮಾತ್ಮ ಆ ವೇಣುವನ್ನು ತನ್ನ ತುಟಿಗೆ ಹಚ್ಚಿದ್ದಾನೆ. ಶ್ರೀಕೃಷ್ಣನ ಸುಂದರವಾದ ತುಟಿಗಳಿಂದ ಹೊರಗೆ ಬಂದ ಧ್ವನಿ ಅದು ಮೊದಲಿಗೆ ಹೊರಬರುವುದು ಕೊಳಲಿನೊಳಗೆ. ನಂತರ ಕೊಳಲಿನಿಂದ ಮತ್ತೆ ಹೊರಗೆ ಬರುತ್ತದೆ. ಆ ಕೊಳಲಿನಿಂದ ಹಾಯ್ದು ಬಂದ ಗಾಳಿಯು ಗಿಡಗಳಿಗೆ ಮರಗಳಿಗೆ ಕೇಳಿಸಿದರೆ ಆ ವನಸ್ಪತಿಜೀವರು ಮಂತ್ರ ಮುಗ್ಧರಾಗಿ ಮೈರೋಮಾಂಚನ ಆಗುವಂತೆ ಆನಂದಿಸಿವೆ.

‘ಶಿಶುರ್ವೆತ್ತಿ ಪಶುರ್ವೆತ್ತಿ ವೇತ್ತಿ ಗಾನರಸಂ ಫಣೀ’ ಎಂದು ಹೇಳಿದಂತೆ ಮಗುವಿಗೂ ಸಂಗೀತ ತಿಳಿಯುತ್ತದೆ. ಶ್ರೀಮನ್ಮಧ್ವಾಚಾರ್ಯರು ವರ್ಣನೆ ಮಾಡುತ್ತಾರೆ. ಬಹಳ ಸುಂದರವಾದ ಸ್ತ್ರೀಯರು ಬಂದರೆ ಗಿಡಬಳ್ಳಿಗಳಲ್ಲಿ ಪುಷ್ಪಗಳು ಅರಳುತ್ತವೆ. ಅವುಗಳಿಗೂ ತಿಳಿವಳಿಕೆ ಇದೆ. ಆಸೆ ಇದೆ. ದುಃಖ ಇದೆ. ತನ್ನನ್ನು ಕತ್ತರಿಸಿ ಒಲೆಗಳಿಗೆ ಹಾಕುವವರನ್ನು ನೋಡಿದರೆ ಆ ಗಿಡಗಳು ಅಳುತ್ತವೆ. ನೀರು ಹಾಕುವವರು ಬಂದರೆ ಸಂತೋಷವನ್ನು ವ್ಯಕ್ತಮಾಡುತ್ತವೆ. ಶ್ರೀಕೃಷ್ಣ ಕೊಳಲು ಬಾರಿಸುತ್ತಿದ್ದರೆ ಸಾಮಾನ್ಯವಾದ ದರ್ಭೆಯಿಂದ ಆರಂಭಿಸಿ ಎಲ್ಲ ಗಿಡಗಳು ಆನಂದ ಬಾಷ್ಪವನ್ನು ಸುರಿಸುತ್ತವೆ. ಇಂತಹ ಧ್ವನಿಯನ್ನು ನೀಡಿದ್ದು ಕೊಳಲು.

ಆ ಕೊಳಲು ಸಾಕ್ಷಾತ್ ಲಕ್ಷ್ಮಿದೇವಿ. ಲಕ್ಷ್ಮೀದೇವಿ ತನ್ನ ಗಂಡನ ಸೇವೆಯನ್ನು ತಾನೇ ಮಾಡಬೇಕು ಎಂದು ಹೀಗೆ ಮಾಡಿದ್ದು. ದಾಸರು ಹೇಳುತ್ತಾರೆ. ‘ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ...’. ತಾನೇ ತನ್ನ ಪತಿಸೇವೆಯನ್ನು ಮಾಡುವವಳಾಗಿ ನೇರವಾಗಿ ತನ್ನ ಗಂಡನ ತುಟಿಗೆ ಮುತ್ತಿಡುವ ಮಹಾಭಾಗ್ಯ ಬಂದಾಗ ಯಾರಿಗೆ ಏಕೆ ಬಿಟ್ಟು ಕೊಡುತ್ತಾಳೆ? ಹೀಗೆ ಲಕ್ಷ್ಮೀದೇವಿ ಸ್ವತಃ ತಾನೇ ವೇಣುರೂಪದಲ್ಲಿ ನಿಂತು ದೇವರ ಸೇವೆ ಮಾಡುತ್ತಿದ್ದಾಳೆ.