ಕೆ.ಆರ್.ನಗರ: ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಾಲೂರು ಹೊಸಕೊಪ್ಪಲು ಗ್ರಾಮದ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ಎ.ಆರ್.ಮಹದೇವಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾಲೂರು ಹೊಸಕೊಪ್ಪಲು ಗ್ರಾಮದ ಸದಸ್ಯ ಕೃಷ್ಣಮೂರ್ತಿ ಮತ್ತು ಕಂಚಿನಕೆರೆ ಗ್ರಾಮದ ಸದಸ್ಯ ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಕೆಂಚಿನಕೆರೆ ಗ್ರಾಮದ ಸದಸ್ಯ ಬಸವರಾಜು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಿಡಿಪಿಒ ಅಣ್ಣಯ್ಯ ಪ್ರಕಟಿಸಿದರು. ಪಿಡಿಒ ಜಿ.ಬಿ.ಸಂತೋಷ್ ಸಹಕಾರ ನೀಡಿದರು.
ಚುನಾವಣೆ ಸಭೆಯಲ್ಲಿ ಉಪಾಧ್ಯಕ್ಷೆ ಕಾಳಮ್ಮ, ಆರ್.ಚಂದ್ರಕಲಾ, ರತ್ನಾ, ಹೇಮಾವತಿ, ಶಿರಿ, ಅನಿತಾ, ಆಶಾ ದೇವು, ದಿಲೀಪ್ ಕುಮಾರ್, ಶಿವಣ್ಣ, ಬಸವರಾಜು, ವಜ್ರಕುಮಾರ್, ಕೆ.ಎಂ.ಮಂಜು, ಎ.ಆರ್.ಮಹದೇವಪ್ಪ ಭಾಗವಹಿಸಿದ್ದರು.
ನೂತನ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಪಕ್ಷಾತೀತವಾಗಿ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಉಳಿದಿರುವ ಕಾಲಮಿತಿಯಲ್ಲಿ ಐದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ಥೇನೆ ಎಂದು ನುಡಿದರು.
ನೂತನವಾಗಿ ಆಯ್ಕೆಯಾದ ಕೃಷ್ಣಮೂರ್ತಿ ಅವರನ್ನು ಪಕ್ಷಾತೀತವಾಗಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಡಿ.ಎಸ್.ಯೋಗೇಶ್, ಕಾಂಗ್ರೆಸ್ ಹಿರಿಯ ಮುಖಂಡ ಸಿ.ಪಿ.ರಮೇಶ್, ರಾಜ್ಯ ಕಾಂಗ್ರೆಸ್ ಒಬಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಯೋಗೇಶ್, ಮುಖಂಡರಾದ ಅರ್ಜುನಹಳ್ಳಿ ಮಧುಕಿರಣ್, ಸಿ.ವಿ.ಗುಡಿ ಪ್ರಸನ್ನ, ಜೆಡಿಎಸ್ ಮುಖಂಡರಾದ ಧನಪಾಲ್, ಸಿ.ವಿ.ಗುಡಿ ಶಂಭು, ಬಾಲೂರು ಕೃಷ್ಣೇಗೌಡ, ನಾಗೇಂದ್ರ, ಕೀರ್ತಿ ಸೇರಿದಂತೆ ಅನೇಕರು ಪಕ್ಷಾತೀತವಾಗಿ ಅಭಿನಂದಿಸಿ, ಶುಭ ಕೋರಿದರು.