ನ್ಯೂಸ್

ಕೃಷ್ಣ ಸಂಧಾನ ಗೋವಾ ಮಹಾ ಮೌನ!

kumarvrl

ನವದೆಹಲಿ: ಮಹದಾಯಿ ಐತೀರ್ಪಿನ ಅಧಿಸೂಚನೆ ಪ್ರಕಟಿಸಬೇಕೆಂದು ಉತ್ತರ ಕರ್ನಾಟಕ ಭಾಗದ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಕರಣ ಸುಪ್ರೀಂನಲ್ಲಿರುವುದರಿಂದ ಅಧಿಸೂಚನೆ ಸಾಧ್ಯವಿಲ್ಲ ಎಂದೇ ಕೇಂದ್ರ ಸರ್ಕಾರ ಹೇಳುತ್ತಿತ್ತು.

ಹೀಗಾಗಿ, ರಾಜ್ಯ ಸರ್ಕಾರದ ಮುಂದೆಯೂ ಕಠಿಣ ಹಾದಿಯಿತ್ತು. ಇಂಥದ್ದೊಂದು ಗಂಭೀರ ಸವಾಲನ್ನು ದಾಟಿ ರಾಜ್ಯಕ್ಕೆ ಅನುಕೂಲವಾಗುವಂತೆ ಮಾಡಿಕೊಟ್ಟವರು ಗೃಹ ಸಚಿವ ಅಮಿತ್ ಷಾ ಮತ್ತು ರಾಜ್ಯ ವಿಧಾನ ಪರಿಷತ್​ನ ಮಾಜಿ ಸದಸ್ಯ ಪಿ.ವಿ. ಕೃಷ್ಣಭಟ್! ಸಹ್ಯಾದ್ರಿ ಜಲಜನ ಸೊಸೈಟಿ ಉಪಾಧ್ಯಕ್ಷ, ಒಡಿಶಾದ ಕೊರಾಪುಟ್ ಯುನಿವರ್ಸಿಟಿ ಚಾನ್ಸಲರ್ ಆಗಿರುವ ಕೃಷ್ಣಭಟ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ನ ಮಾಜಿ ರಾಷ್ಟ್ರಾಧ್ಯಕ್ಷರೂ ಹೌದು. ಮಹಾದಾಯಿ ನೀರು ಬಳಸಿಕೊಂಡು ಮಲಪ್ರಭಾ ಕಣಿವೆಯಲ್ಲಿ ನೀರಾವರಿ ಯೋಜನೆಗಳನ್ನು ಜಲಜನ ಸೊಸೈಟಿ ಮೂಲಕ ಕೈಗೆತ್ತಿಕೊಳ್ಳಲು ಕೃಷ್ಣಭಟ್ ಶ್ರಮಿಸುತ್ತಿದ್ದಾರೆ.

ಅವರಿಗೆ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ನೀರಾವರಿ ಇಲಾಖೆಯ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಡಾ.ಎಂ.ಆರ್. ರಂಗನಾಥ್ ಸೇರಿ ಅನೇಕರು ಸಾಥ್ ನೀಡಿದ್ದಾರೆ. ಫೆ.20ರ ಮಹದಾಯಿ ವಿಚಾರಣೆ ಹಿನ್ನೆಲೆಯಲ್ಲಿ 3 ದಿನದ ಹಿಂದೆ ಅಮಿತ್ ಷಾರನ್ನು ಭೇಟಿ ಮಾಡಿದ್ದ ಕೃಷ್ಣಭಟ್, ಅಧಿಸೂಚನೆ ಪ್ರಕಟಣೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದ್ದರು ಮತ್ತು ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಯೋಜನೆಗಳ ಅವಶ್ಯಕತೆ ಬಗ್ಗೆಯೂ ಗಮನಸೆಳೆದಿದ್ದರು. ಗೋವಾ ಸರ್ಕಾರ ಅಧಿಸೂಚನೆಗೆ ವಿರೋಧಿಸುತ್ತಿರುವುದರಿಂದ ಐತೀರ್ಪಿನ ಪಾಲನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೋವಾ ಮುಖ್ಯಮಂತ್ರಿಗಳನ್ನು ನೀವು ಒಪ್ಪಿಸಬೇಕು ಎಂದು ವಿವರಿಸಿದ್ದರು. ಇದಕ್ಕೊಪ್ಪಿದ್ದ ಅಮಿತ್ ಷಾ, ಜಲಜನ ಸೊಸೈಟಿಯ ಡಾ.ಎಂ.ಆರ್. ರಂಗನಾಥ್ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡರು.

‘ನೀವು ಚಿಂತೆ ಮಾಡಬೇಡಿ. ನಿಮ್ಮ ಕೆಲಸ ಮಾಡಿಕೊಡುತ್ತೇವೆ’ ಎಂದು ಕೃಷ್ಣಭಟ್ಟರಿಗೆ ಭರವಸೆ ನೀಡಿದ ಷಾ, ಗೋವಾ ಸಿಎಂ ಪ್ರಮೋದ್ ಸಾವಂತ್​ರೊಂದಿಗೆ ಮಾತನಾಡಿ ಸುಪ್ರೀಂ ವಿಚಾರಣೆ ವೇಳೆ ಅಧಿಸೂಚನೆಗೆ ಸಮ್ಮತಿ ನೀಡಬಹುದು. ಮೇಲ್ಮನವಿ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ನ್ಯಾಯಾಧಿಕರಣ ತೀರ್ಪು ನೀಡಿಯಾಗಿದೆ. ಮೂರೂ ರಾಜ್ಯಗಳಿಗೂ ಇಂತಿಷ್ಟು ನೀರು ನಿಗದಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ಅಂತಿಮ ತೀರ್ಪು ಬರುವ ತನಕ ಆ ಪ್ರಮಾಣದ ನೀರು ಬಳಸಿಕೊಳ್ಳಬಹುದಲ್ಲವೇ? ಸದ್ಯಕ್ಕೆ ಯಾರೂ ನೀರನ್ನು ಬಳಸಿಕೊಳ್ಳಲಾಗುತ್ತಿಲ್ಲ. ಅಧಿಸೂಚನೆ ಪ್ರಕಟವಾದರೆ ಮೂರೂ ರಾಜ್ಯಗಳಿಗೆ ಒಳ್ಳೆಯದು ಎನ್ನುವುದು ಷಾ ಅಭಿಪ್ರಾಯವಾಗಿತ್ತು. ಜಲಜನ ಸೊಸೈಟಿ ಸದಸ್ಯರು ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ರನ್ನು ಹಲವು ಬಾರಿ ಭೇಟಿ ಮಾಡಿ ನೋಟಿಫಿಕೇಷನ್​ಗೆ ಒತ್ತಾಯಿಸಿದ್ದರು. ಅಂತಿಮವಾಗಿ ಅಮಿತ್ ಷಾ, ಗಡ್ಕರಿ, ಶೇಖಾವತ್ ಮಾತಿಗೆ ಒಪ್ಪಿದ ಗೋವಾ ರಾಜ್ಯದ ಬೇಡಿಕೆಗೆ ಸಹಮತಿಯನ್ನೂ ನೀಡಿತು.

ಮಹದಾಯಿ ವಿವಾದದ ಬಗ್ಗೆ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಅನುಸಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂದು ಸವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವುದು ಸ್ವಾಗತಾರ್ಹ. ಬೆಳಗಾವಿ ಹುಬ್ಬಳ್ಳಿ -ಧಾರವಾಡ ಗದಗ ಜಿಲ್ಲೆಗಳ ಬಹುದಿನದ ಸಮಸ್ಯೆಗೆ ಪರಿಹಾರ ಸಿಗುವಂತಾಗಿದೆ,13.8 ಟಿಎಂಸಿ ನೀರು ರಾಜ್ಯದ ಪಾಲಿಗೆ ಸಿಗಲಿದೆ. ಇದರಿಂದ ರೈತರ ಹೋರಾಟಕ್ಕೂ ಜಯ ಸಿಕ್ಕಂತಾಗಿದೆ. | ಕುರಬೂರು ಶಾಂತಕುಮಾರ್ ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ರ್ಚಚಿಸಿದ್ದು, ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಮುಂದಿನ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ. | ಪ್ರಲ್ಹಾದ್ ಜೋಶಿ ಕೇಂದ್ರ ಸಚಿವ ಮಹದಾಯಿ ಯೋಜನೆ ಬಗ್ಗೆ ನ್ಯಾಯಾಲಯ ನೀಡಿರುವ ತೀರ್ಪು ರೈತರ ಪಾಲಿಗೆ ವರವಾಗಿದೆ. ಹೋರಾಟ ನಡೆಸಿದ ರೈತ ಸಂಘಟನೆಗಳಿಗೆ ಸಂದ ಜಯವಾಗಿದೆ. | ಸಚಿನ್ ಮೀಗಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿರುವುದು ಅತ್ಯಂತ ಸಂತೋಷದ ಸಂಗತಿ. ಇದು ಉತ್ತರ ಕರ್ನಾಟಕದ ರೈತರಿಗೆ ಸಿಕ್ಕ ನ್ಯಾಯ. ಕಾನೂನಿನ ವಿರುದ್ಧ ಯಾರೇ ಹೋದರೂ ಹಿನ್ನಡೆ ಆಗುತ್ತದೆ. | ವೀರೇಶ ಸೊಬರದಮಠ ಹೋರಾಟಗಾರ