ನ್ಯೂಸ್

ತಂದೆ ತಾಯಿ ಕಾಣಲು ಬಂದ ಕೃಷ್ಣ

ಸುದೀಪ್​ ವಿ.ಎನ್​

ಕಂಸನ ಸಂಹಾರ ಆಗುತ್ತಿದ್ದಂತೆ ಶ್ರೀಕೃಷ್ಣ ನೇರವಾಗಿ ತಂದೆ ತಾಯಿಗಳ ಹತ್ತಿರ ಬಂದು ಅವರ ಬಂಧನವನ್ನು ಬಿಡಿಸಿ ಕಾಲಿಗೆ ನಮಸ್ಕಾರ ಮಾಡುತ್ತಾನೆ. ಅವರಿಗೆ ಮಾತೇ ಹೊರಡುತ್ತಿಲ್ಲ. ಆಲಿಂಗನ ಮಾಡಿಕೊಂಡಿದ್ದಾರೆ. ಕಣ್ಣೀರು ಸುರಿಯುತ್ತಿದೆ. ಪುಟ್ಟ ಮಕ್ಕಳು ತಂದೆ ತಾಯಿಗಳ ಹತ್ತಿರ ಪಡೆಯುವ ಆನಂದ ಈ ಜನ್ಮದಲ್ಲಿ ನನಗೆ ಸಿಗಲೇ ಇಲ್ಲ ಎನ್ನುತ್ತಾನೆ. ಈ ಜನ್ಮದಲ್ಲಿ ಅಲ್ಲ, ಆ ಆನಂದ ಎಂದೂ ಸಿಗುವುದಿಲ್ಲ. ಅವನಿಗೆ ಯಾರೂ ತಂದೆ ಇಲ್ಲ, ತಾಯಿ ಇಲ್ಲ. ಯಾವ ಜನ್ಮದೊಳಗೂ ಇಲ್ಲ. ನನಗೆ ತಂದೆ ತಾಯಿಯ ಸುಖ ಇಲ್ಲ ಎಂದು ದೇವರು ಹೇಳಿಕೊಂಡನಲ್ಲ, ಅದು ಸತ್ಯ, ಅವನಿಗೆ ತಂದೆ ತಾಯಿಯ ಸುಖ ಇಲ್ಲವೇ ಇಲ್ಲ.

ಯಾರಿದ್ದಾರೆ ಅವನಿಗೆ ತಂದೆ ತಾಯಿ? ತಂದೆ ತಾಯಿಯಾಗಿ ತಾನು ಇನ್ನೊಬ್ಬರಿಗೆ ಸುಖ ಕೊಟ್ಟಾನೇ ಹೊರತು ತನಗೆ ಇನ್ನೊಬ್ಬರು ತಂದೆ ತಾಯಿಗಳು ಯಾರೂ ಇಲ್ಲ. ಆದ್ದರಿಂದ ಪರಮಾತ್ಮ ವಿಡಂಬನೆ ಮಾಡುತ್ತಿದ್ದಾನೆ. ನನಗೆ ಯಾವ ವಿಧವಾಗಿಯೂ ಸುಖವನ್ನು ಅನುಭವಿಸಲಿಕ್ಕೆ ಆಗಲಿಲ್ಲ, ಸುಖ ಅನುಭವಿಸುವುದು ಹಾಗಿರಲಿ, ಸೇವೆ ಮಾಡಬೇಕಾಗಿತ್ತು ಅದನ್ನೂ ಮಾಡಲಿಲ್ಲ. ತಂದೆ ತಾಯಿಗಳ ಸೇವೆಯನ್ನು ಮಕ್ಕಳು ಮಾಡಬೇಕು ಎಂದು ಜನರಿಗೆ ತಿಳಿಸುವುದಕ್ಕಾಗಿ ಪರಮಾತ್ಮ ಈ ನಾಟಕವಾಡುತ್ತಿದ್ದಾನೆ.ಈ ದೇಹದಿಂದ, ಧರ್ಮವನ್ನು ಸಂಪಾದನೆ ಮಾಡಬೇಕು. ಅರ್ಥವನ್ನು ಪಡೆಯಬೇಕು, ಹಣ ಗಳಿಸಬೇಕು, ಸುಖ ಅನುಭವಿಸಬೇಕು, ಐಶ್ವರ್ಯ ಅನುಭವಿಸಬೇಕು, ಸಂಪತ್ತು, ಅಧಿಕಾರ ಬೇಕು, ಕಾಮೋಪಭೋಗ ಮಾಡಬೇಕು. ಇದೇ ರೀತಿ ಕೊನೆಗೂ ಶಾಶ್ವತವಾದ ಚಿರಂತನವಾದ ಮೋಕ್ಷವನ್ನು ಪಡೆಯಬೇಕು, ಅನಂತ ಸೌಖ್ಯವನ್ನು ಅನುಭವಿಸಬೇಕು. ಇದೇ ದೇಹದಿಂದ ಸಾಧನೆ ಮಾಡಿ ಇದೇ ದೇಹದಲ್ಲಿ ಮೋಕ್ಷವನ್ನು ಹೊಂದಬೇಕು. ಇದೇ ದೇಹದೊಳಗಿದ್ದು ಧರ್ಮ ಮಾಡಿ, ಸಾಧನೆ ಮಾಡಿ, ಪುಣ್ಯ ಸಂಪಾದನೆ ಮಾಡಿ, ಶಾಸ್ತ್ರ ಜ್ಞಾನವನ್ನು ಸಂಪಾದನೆ ಮಾಡಿ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡು ಮೋಕ್ಷದ ಸುಖವನ್ನು ಹೊಂದಬೇಕು.