ನ್ಯೂಸ್

ಜಾರಿ ನಿರ್ದೇಶನಾಲಯ ಒಂದು ಸೀಳು ನಾಯಿ, ಅದು ವಿಚ್‌ ಹಂಟಿಂಗ್‌ ಏಜೆನ್ಸಿ: ಸಚಿವ Krishna Byregowda

ಗದಗ: ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಇಡಿ (ಜಾರಿ ನಿರ್ದೇಶನಾಲಯ) ಸೀಳು ನಾಳಿ ಇದ್ದಂತೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byregowda) ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು (Krishna Byregowda), ಜಾರಿ ನಿರ್ದೇಶನಾಲಯ ಬಿಜೆಪಿಯ ಅಂಗ ಸಂಸ್ಥೆಯಾಗಿದೆ. ವಿರೋಧ ಪಕ್ಷಗಳನ್ನು ಗುರಿ ಮಾಡುವುದು. ವಿರೋಧ ಪಕ್ಷದ ನಾಯಕರನ್ನು ಬಲಿ ಹಾಕುವುದೇ ಇಡಿ ಉದ್ಯೋಗ. ಇಡೀ ದೇಶದಲ್ಲಿ ಅವರು ಇದೇ ಕೆಲಸ ಮಾಡಿದ್ದಾರೆ. ಇಡಿ ಅಂದರೆ ಎನ್ಫೋರ್ಸ್‌ಮೆಂಟ್‌ ಡೈರಕ್ಟರೇಟ್‌ ಅಲ್ಲ; ಅದು ವಿಚ್‌ ಹಂಟಿಂಗ್‌ ಏಜೆನ್ಸಿ ಎಂದು ಬುಧವಾರ ಹರಿಹಾಯ್ದಿದ್ದಾರೆ.

ಇಡಿಯವರು ಇಲ್ಲೀವರೆಗೆ ಯಾರ‍್ಯಾರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೇವಲ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್‌ ಹಾಕಿದ್ದಾರೆ. ಸ್ವಿಸ್‌ ಬ್ಯಾಂಕ್‌ನಲ್ಲಿ ಹಣ ಇಟ್ಟವರ ಮೇಲೆ ಪ್ರಕರಣ ದಾಖಲಿಸಿದ್ದಾರೆಯೇ. ಇಲ್ಲೀವರೆಗೆ ಇಡಿ ಎಷ್ಟು ಪ್ರಕರಣ ದಾಖಲಿಸಿದೆಯೋ ಅದರಲ್ಲಿ ಶೇ 90ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ಮೇಲೆ ಇದ್ದಾವೆ. ಆ ಪೈಕಿ ಶೇ 1.5ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ. ಉಳಿದವುಗಳನ್ನು ಅವರಿಗೆ ಸಾಬೀತುಪಡಿಸಲು ಆಗಿಲ್ಲ. ಹಿಟ್‌ ಆ್ಯಂಡ್‌ ರನ್‌ ಮಾಡುವುದೇ ಇದರ ಕೆಲಸ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದ ಮೇಲೆ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲೂ ನಮ್ಮನ್ನು ಸೋಲಿಸಲು ಆಗಲಿಲ್ಲ. ಅದಕ್ಕೆ ಮುಡಾ ವಿಚಾರದಲ್ಲಿ ಇಡಿ ಅನ್ನೋ ಸೀಳು ನಾಯಿ ಬಿಟ್ಟಿದ್ದಾರೆ. ದೇಶದಲ್ಲಿ ಜಾರಿ ನಿರ್ದೇಶನಾಲಯದವರು ಒಬ್ಬ ಬಿಜೆಪಿ ನಾಯಕನ ಮೇಲೆ ಪ್ರಕರಣ ದಾಖಲಿಸಿದೆಯಾ? ಇದು ರಾಜಕೀಯ ಪ್ರೇರಿತ ದಾಳಿ. ಬಿಜೆಪಿ ಸೋತು ನಿರಾಸೆಯಾಗಿ ಇಡಿಯನ್ನು ಛೂ ಬಿಟ್ಟಿದೆ. ಅದನ್ನು ನಾವು ಕಾನೂನಾತ್ಮಕವಾಗಿ ಹಾಗೂ ಜನತಾ ನ್ಯಾಯಾಲಯದಲ್ಲೂ ಎದುರಿಸುತ್ತೇವೆ.

ಬಿಜೆಪಿಯ ಎರಡು ಬಣಗಳ ವಕ್ಫ್‌ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು ನಡೆಸುತ್ತಿರುವ ಹೋರಾಟ. ವಕ್ಫ್‌ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲೇ ನಾಲ್ಕು ಸಾವಿರ ಖಾತೆಗಳು ಬದಲಾಗಿವೆ. ಇವರೆಲ್ಲರೂ ಆಗ ಎಲ್ಲಿಗೆ ಹೋಗಿದ್ದರು. ಜನರನ್ನು ಯಾಮಾರಿಸಲು ವಕ್ಫ್‌ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಬಫರ್‌ ಜೋನ್‌ ತಗ್ಗಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವನ್ಯಜೀವಿಧಾಮದಿಂದ ಬಫರ್‌ ಜೋನ್‌ ಎಷ್ಟು ಇರಬೇಕು ಎಂಬುದನ್ನು ಚರ್ಚಿಸಬೇಕಿದೆ. ಅರಣ್ಯ ಪ್ರದೇಶದ ಒಂದಿಂಚು ಜಾಗ ಕಡಿಮೆ ಮಾಡುವ ಚರ್ಚೆ ಎಲ್ಲಿಯೂ ನಡೆದಿಲ್ಲ. ಕೇಂದ್ರ ಸರ್ಕಾರ ಹೇಳುವಂತೆ ಕನಿಷ್ಠ ಒಂದು ಕಿ.ಮೀ. ಬಫರ್‌ ಜೋನ್‌ ಇರಬೇಕು. ಅರಣ್ಯ ಪ್ರದೇಶ ಹೊರತುಪಡಿಸಿ ರೈತರ ಜಮೀನಿನಲ್ಲಿ ಎಷ್ಟು ಬಫರ್‌ ಜೋನ್‌ ಮಾಡಬೇಕು ಎಂಬುದು ವಿಷಯ. ಕಾನೂನು, ನ್ಯಾಯಾಲಯದ ಮೂಲಕ ಆ ಪ್ರಕ್ರಿಯೆ ನಡೆಯಲಿದೆ. ಖಾಸಗಿ ಜಮೀನಿನಲ್ಲಿ ಬಫರ್‌ ಜೋನ್‌ ಮಾಡಿದರೆ ಅವರು ಹಕ್ಕು ಮೊಟಕುಗೊಳಿಸಿದಂತೆ ಆಗಲಿದೆ. ನಾಳೆ ಮನೆ ಕಟ್ಟ ಬೇಕಾದರೂ ಕೆಲವು ನಿಯಮಗಳು ಅನ್ವಯ ಆಗಲಿವೆ. ಹಾಗಾಗಿ, ಸ್ಥಳೀಯರ ಭಾವನೆಗೂ ಮನ್ನಣೆ ಕೊಡಲು ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ತಿಳಿಸಿದ್ದಾರೆ.